ಸಹಾರ ಗ್ರೂಪ್‌ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

ಮುಂಬಯಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಹಾರಾ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತಾ ರಾಯ್ ಮುಂಬಯಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಸುಬ್ರತಾ ರಾಯ್ (75) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಭಾನುವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಹೃದಯ ಸ್ತಂಭನದಿಂದ ವಿಧಿವಶರಾದರು ಎಂದು ಸಹಾರಾ ಗ್ರೂಪ್‌ ತಿಳಿಸಿದೆ.
ಬಿಹಾರದ ಅರಾರಿಯಾದಲ್ಲಿ 1948ರಲ್ಲಿ ಜನಿಸಿದ ಸುಬ್ರತಾ ರಾಯ್ ಅವರು ಕೇವಲ 2,000 ರೂ. ಬಂಡವಾಳದೊಂದಿಗೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ 1978ರಲ್ಲಿ ಸಣ್ಣ ಫೈನಾನ್ಸ್‌ ಆರಂಭಿಸುವ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
ಫೈನಾನ್ಸ್‌ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತಿದ್ದಂತೆ ಠೇವಣಿದಾರರ ಸಂಖ್ಯೆಯೂ ಹೆಚ್ಚಾಗಿ 29 ವರ್ಷಗಳಲ್ಲಿ ಠೇವಣಿದಾರರ ಸಂಖ್ಯೆ 6.1 ಕೋಟಿ ದಾಟಿತ್ತು. ದೇಶಾದ್ಯಂತ 1,700ಕ್ಕೂ ಹೆಚ್ಚು ಕಚೇರಿಗಳು ಇದ್ದವು. ಹಂತ ಹಂತವಾಗಿ ಮೂಲಸೌಕರ್ಯ, ಹಣಕಾಸು, ರಿಯಲ್ ಎಸ್ಟೇಟ್, ರಿಟೇಲ್, ಮಾಧ್ಯಮ, ಮನರಂಜನೆ ಮುಂತಾದ ವಲಯಗಳಲ್ಲಿ ಸಹಾರಾ ಸಮೂಹ ಹೂಡಿಕೆ ಮಾಡಿತ್ತು.
68,000 ಕೋಟಿ ರೂ.ಗೂ ಹೆಚ್ಚು ನಿವ್ವಳ ಸಂಪತ್ತು ಮತ್ತು 1.5 ಲಕ್ಷ ಕೋಟಿ ರೂ. ಬೆಲೆಯ ಆಸ್ತಿ ಹೊಂದಿದ ಸಂಸ್ಥೆಯಾಗಿತ್ತು ಸಹಾರ ಸಮೂಹ. 2010ರಲ್ಲಿ ಐಪಿಎಲ್ ತಂಡಗಳ ಹರಾಜಿನಲ್ಲಿ ಸಹಾರಾ ಸಮೂಹ ಪುಣೆ ವಾರಿಯರ್ಸ್‌ ತಂಡವನ್ನು 1,702 ಕೋಟಿ ರೂ.ಗೆ ಖರೀದಿಸಿತ್ತು. ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. 2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸಹಾರಾ ಕಂಪನಿ ಪ್ರಾಯೋಜಿಸಿದ್ದ ಜೆರ್ಸಿ ಧರಿಸಿತ್ತು.
ಆದರೆ 2009ರಿಂದ ಕಂಪನಿಯ ದುರ್ದೆಸೆ ಶುರುವಾಗಿತ್ತು. ಸೆಬಿಗೆ ಹೂಡಿಕೆದಾರರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ 2009ರಲ್ಲಿ ದೂರು ದಾಖಲಿಸಿತ್ತು. ಈ ಬಗ್ಗೆ ತನಿಖೆ ಮುಂದುವರಿದಾಗ ಮೂರು ಕೋಟಿಗೂ ಹೆಚ್ಚು ಹೂಡಿಕೆದಾರರಿಗೆ 24,000 ಕೋಟಿ ರೂ. ವಂಚಿಸಿರುವ ಹಗರಣ ಬಯಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಸುಬ್ರತಾ ರಾಯ್ ತಿಹಾರ್‌ ಜೈಲು ಸೇರಿದ್ದರು. ಅನಂತರ ಸಹಾರ ಸಮೂಹ ಅವನತಿಯತ್ತ ಸಾಗಿತ್ತು.
ಸುಬ್ರತಾ ರಾಯ್ ಪತ್ನಿ ಸ್ವಪ್ನಾ ರಾಯ್ ಮತ್ತು ಇಬ್ಬರು ಪುತ್ರರಾದ ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಅವರನ್ನು ಅಗಲಿದ್ದಾರೆ.

































































error: Content is protected !!
Scroll to Top