ಕಾರ್ಕಳ : ಅರೆಬಿಕ್ ಹಾಸ್ಟೆಲ್‌ನ ಕಾರ್ಯದರ್ಶಿ ಮತ್ತು ಮದರಸ ಶಿಕ್ಷಕ ಮಹಮ್ಮದ್ ಅಶ್ಫಕ್ (30) ಎಂಬವರ ಮೇಲೆ ತೌಫಿಕ್ ಎಂಬಾತ ಹಲ್ಲೆ ನಡೆಸಿದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಚೇತನರಾಗಿರುವ ಮಹಮ್ಮದ್ ಅಶ್ಫಕ್ ಅರೆಬಿಕ್ ಹಾಸ್ಟೆಲ್‌ನಲ್ಲಿ ಸೆಕ್ರೆಟರಿ ಆಗಿ ಕೆಲಸ ಮಾಡುತ್ತಾ ಪತ್ನಿಯೊಂದಿಗೆ ಹಾಸ್ಟೆಲ್ ಉಸ್ತುವಾರಿ ಹಾಗೂ ಮದರಸ ಶಿಕ್ಷಕನಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದರು. ಹಾಸ್ಟೆಲ್‌ನ ಲೆಕ್ಕಾಚಾರದ ಬಗ್ಗೆ ಅಧ್ಯಕ್ಷ ಅಬ್ರಕ್ ಅಹಮದ್ ಎಂಬುವವರಲ್ಲಿ 5 ವರ್ಷಗಳಿಂದ ಕೇಳುತ್ತಿದ್ದರು. ಈ ವಿಚಾರವಾಗಿ ವೈಮನಸ್ಸು ಇತ್ತು ಎನ್ನಲಾಗಿದೆ.
ಅ. 31ರಂದು ರಾತ್ರಿ 9 ಗಂಟೆಗೆ ಮಹಮ್ಮದ್ ಅಶ್ಫಕ್ ಹಾಸ್ಟೆಲ್‌ಗೆ ಬಂದಾಗ ಅಲ್ಲಿ ಮಹಮ್ಮದ ಅಬ್ರಕ್ ಅವರ ಪತ್ನಿ ಆಯಿಶಾ, ಫಹಾದ್, ತೌಫಿಖ್ ಎಂಬವರು ಕುಳಿತು ಮಾತನಾಡುತ್ತಿದ್ದರು. ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ತೌಫಿಖ್ ಸಿಟ್ಟಿಗೆದ್ದು ಅವಾಚ್ಯ ಶಬ್ದಗಳಿಂದ ಬೈದು ದೂಡಿ ಬೀಳಿಸಿ ಹಲ್ಲೆ ಮಾಡಿದ್ದಾನೆ. ಮಹಮ್ಮದ್ ಅಶ್ಫಕ್ ಮತ್ತು ಪತ್ನಿ ಅಂದು ರಾತ್ರಿ ಹಾಸ್ಟೆಲ್‌ನಲ್ಲಿಯೇ ಉಳಿದು ಮರುದಿನ ಬೆಳಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಬೈಕ್‌ಗೆ ಸ್ಕೂಟರ್ ಡಿಕ್ಕಿ : ಸವಾರರಿಗೆ ಗಾಯ
ಬೈಕ್‌ಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಗಾಯಗೊಂಡು ಘಟನೆ ಗುರುವಾರ ಮಧ್ಯಾಹ್ನ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಪರಿಚಿತ್ ಎಂಬವರು ಬೈಕ್‌ನಲ್ಲಿ ಹೋಗುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ರಸ್ತೆಗೆ ಬಿದ್ದು ಪರಿಚಿತ್ ಗಾಯಗೊಂಡಿದ್ದಾರೆ. ಸ್ಕೂಟರ್‌ನ ಹಿಂಬದಿ ಸವಾರೆ ಮಹಿಳೆಗೂ ಚಿಕ್ಕಪುಟ್ಟ ಗಾಯಗಳಾಗಿವೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





































