ಬೆಂಗಳೂರು : ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ನಮಗೆ ಪಾಠ ಕಲಿಸಿದೆ. ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿ ಪಟಾಕಿ ಬ್ಯಾನ್ಗೆ ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತದಲ್ಲಿ 17 ಮಂದಿ ಸಾವು ವಿಷಾದನೀಯ. ಪಟಾಕಿ ಮಳಿಗೆ ಮಾಲೀಕ 2017 ರಿಂದ 2022 ವರೆಗೆ ನೂತನ ಪರವಾನಗಿ ನವೀಕರಣ ನಡುವೆ ಫೇಕ್ ಲೈಸೆನ್ಸ್ ಸೃಷ್ಟಿ ಮಾಡಲಾಗಿದೆ. ಕೇವಲ 1 ಸಾವಿರ ಕೆಜಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ಆದರೆ 50 ಟನ್ಗೂ ಅಧಿಕ ಪಟಾಕಿ ಅಕ್ರಮವಾಗಿ ದಸ್ತಾನು ಮಾಡಲಾಗಿತ್ತು.
ಅಕ್ರಮ ದಸ್ತಾನು ಪರಿಶೀಲನೆ ವೇಳೆ ತಹಶಿಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು, ಪೊಲೀಸ್, ಪೈರ್ ಮತ್ತು ಟ್ರಾನ್ಸ್‌ಪೋರ್ಟ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಗಡಿಯಲ್ಲಿ ಆರ್ಟಿಓ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಿಲ್ಲ. ಹಾಗಾಗಿ ತಹಶಿಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.










































