ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಮೇಲೆ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ, ಕರ್ನಾಟಕಕ್ಕೆ ಕತ್ತಲೆ ಭಾಗ್ಯ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬುಧವಾರ ವ್ಯಂಗ್ಯವಾಡಿದ್ದಾರೆ. ಸಿಎಂ, ಡಿಸಿಎಂ ಅಧಿಕಾರದ ಕಾದಾಟದ ಪರಿಣಾಮ ರಾಜ್ಯದ ಜನತೆ ತೊಂದರೆಗೆ ಸಿಲುಕಿದ್ದಾರೆ. ಸಿದ್ದರಾಮಯ್ಯರನ್ನು ಮನೆಗೆ ಕಳಿಸಬೇಕು ಅಂತಾ ಡಿಕೆ ಶಿವಕುಮಾರ್, ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಬೇಕು ಅಂತಾ ಸಿದ್ದರಾಮಣ್ಣ ಯತ್ನಿಸುತ್ತಿದ್ದಾರೆ. ಈ ಕಾದಾಟದಲ್ಲಿ ಕರ್ನಾಟಕ ರಾಜ್ಯ ಬಡವಾಗಿದೆ ಎಂದು ಕಟೀಲ್ ಟೀಕಿಸಿದ್ದಾರೆ.
ವರ್ಗಾವಣೆಯಲ್ಲಿ ರೇಟ್ ಫಿಕ್ಸ್ ಮಾಡುವ ಕೆಲಸ ಆಗಿದೆ. ಸಿಎಂ ಕಚೇರಿಯಲ್ಲೇ ಯಾರ್ಯಾರಿಗೆ ಎಷ್ಟೆಷ್ಟು ಅಂತಾ ಬೋರ್ಡ್ ಫಿಕ್ಸ್ ಆಗಿದೆ. ವರ್ಗಾವಣೆಯಿಂದ ಆರಂಭವಾದ ಭ್ರಷ್ಟಾಚಾರ, ಗುತ್ತಿಗೆದಾರರ ಕಮಿಷನ್, ದಸರಾ ಹಬ್ಬದಲ್ಲೂ ಲಜ್ಜೆಗೇಡಿತನದ ಸರಕಾರ ಲಂಚ ಕೇಳಿದೆ. ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಕಟೀಲ್ ಆಗ್ರಹಿಸಿದ್ದಾರೆ.
ತೆಲಂಗಾಣದಲ್ಲಿ ಸಚಿವ ಶಿವಾನಂದ ಪಾಟೀಲ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹಣ ತೂರಾಟ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಬರ ಇರುವಾಗ ಸಚಿವರು ಹೈದರಾಬಾದ್ನಲ್ಲಿ ಹೋಗಿ ಹಣದಲ್ಲಿ ಚೆಲ್ಲಾಟ ಆಡುತ್ತಾರೆ. ರಾಜ್ಯದಿಂದ ಲೂಟಿ ಮಾಡಿದ, ಭ್ರಷ್ಟಾಚಾರ ಮಾಡಿದ ಹಣದಲ್ಲಿ ಅಲ್ಲಿ ಆಟ ಆಡುತ್ತಾರೆ. ರೈತರಿಗೆ ಸ್ಪಂದಿಸದೇ ಸಚಿವರು ಮಜಾ ಉಡಾಯಿಸುತ್ತಿದ್ದಾರೆ. ಎಂತಹ ಸರಕಾರ ಇದು, ಎಂತಹ ಸಚಿವರು ಇವರು? ಸಿಎಂ ಏನು ಕಣ್ಣು ಮುಚ್ಚಿ ಕುಳಿತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.










































