ಕೆವಿಜಿ ಪಾಲಿಟೆಕ್ನಿಟ್ ಪ್ರಾಂಶುಪಾಲ ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣ

ಡಾ| ರೇಣುಕಾ ಪ್ರಸಾದ್‌ಗೆ ಜೀವಾವಧಿ ಶಿಕ್ಷೆ – ಹೈಕೋರ್ಟ್‌ ಆದೇಶ

ಮಂಗಳೂರು : 12 ವರ್ಷಗಳ ಹಿಂದೆ ನಡೆದ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಪ್ರಾಂಶುಪಾಲ ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಡಾ| ರೇಣುಕಾ ಪ್ರಸಾದ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹೈ ಕೋರ್ಟ್ ನ್ಯಾಯಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠದಿಂದ ಶಿಕ್ಷೆ ಪ್ರಮಾಣ ಪ್ರಕಟವಾಗಿದೆ. ಕೆಲ ದಿನಗಳ ಹಿಂದೆ ರೇಣುಕಾ ಪ್ರಸಾದ್ ಸೇರಿ ಆರು ಮಂದಿ ದೋಷಿಗಳೆಂದು ಹೈಕೋರ್ಟ್ ತೀರ್ಪು ನೀಡಿತ್ತು. ಅಪರಾಧಿಗಳಲ್ಲಿ ಓರ್ವನಾದ ಶರಣ್ ಪೂಜಾರಿ ಗೈರಾದ ಹಿನ್ನೆಲೆಯಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಪ್ರಕರಣದಲ್ಲಿ ಡಾ| ರೇಣುಕಾಪ್ರಸಾದ್‌ ಸೇರಿದಂತೆ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಸರಕಾರದ ಪರವಾಗಿ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಆರು ಜನರನ್ನು ದೋಷಿ ಎಂದು ಆದೇಶ ಹೊರಡಿಸಿತ್ತು.

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ| ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌.ಆರ್‌. ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ.ಎಸ್‌. ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿದೆ. ಆದರೆ, ಏಳನೇ ಆರೋಪಿಯಾಗಿದ್ದ ಎಚ್‌.ಯು. ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಇದೇ ವೇಳೆ ಎತ್ತಿ ಹಿಡಿದಿದೆ.

ಪ್ರಕರಣದ ಹಿನ್ನೆಲೆ
ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಸಂಸ್ಥಾಪಕರಾಗಿದ್ದರು. ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಅವರು ಹಿರಿಯ ಪುತ್ರ ಕೆ.ವಿ.ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ವಿಭಜನೆ ಮಾಡಿಕೊಟ್ಟಿದ್ದರು. ಈ ವೇಳೆ ಪ್ರೊ. ಎ.ಎಸ್.ರಾಮಕೃಷ್ಣ ಅವರು ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಂದೆ ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಿದ್ದಾರೆ ಎಂದು ರೇಣುಕಾ ಪ್ರಸಾದ್ ಭಾವಿಸಿದ್ದರು. ಅಲ್ಲದೆ ಚಿದಾನಂದ ಅವರ ಪರವಾಗಿ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣ ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್ ಇದರಿಂದ ತೀವ್ರ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದ ಎಂಬ ಆರೋಪ ಕೇಳಿಬಂದಿತ್ತು.

2011ರ ಎಪ್ರಿಲ್ 28ರಂದು ಬೆಳಗ್ಗೆ 7:45ರ ವೇಳೆಯಲ್ಲಿ ಅಂಬಟೆಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್ ಮೊದಲ ಆರೋಪಿ ಎಂದು ಪತ್ತೆಹಚ್ಚಿದ್ದಲ್ಲದೆ, ಒಟ್ಟು ಏಳು ಮಂದಿಯನ್ನು ಆರೋಪಿಗಳಾಗಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆ ಕಾರಣ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಅಕ್ಟೋಬರ್ 21ರಂದು ಆದೇಶಿಸಿತ್ತು.









































error: Content is protected !!
Scroll to Top