ಬಿಗು ನಿರ್ಬಂಧ ವಿರೋಧಿಸಿ ವಾರದಿಂದ ಲಾರಿ ಮಾಲಕ-ಚಾಲಕರ ಪ್ರತಿಭಟನೆ
ಉಡುಪಿ : ಒಂದೆಡೆ ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಮುಂತಾದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಲಾರಿ, ಟೆಂಪೊ, ಟಿಪ್ಪರ್ ಮತ್ತಿತರ ವಾಹನಗಳನ್ನು ಹಿಡಿದು ಪೊಲೀಸರು ಕೇಸು ಜಡಿಯುತ್ತಿರುವುದನ್ನು ವಿರೋಧಿಸಿ ಲಾರಿ ಮಾಲಕರು ಮತ್ತು ಚಾಲಕರು ಕಳೆದ ಒಂದು ವಾರದಿಂದ ಉಡುಪಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆಯೇ ರಾತೋರಾತ್ರಿ ಅಕ್ರಮವಾಗಿ ಜಲ್ಲಿಕಲ್ಲು, ಮರಳು ಸಾಗಾಟ ಮಾಡಲು ಪ್ರಯತ್ನಿಸಲಾಗಿದೆ. ಉಡುಪಿ ಸಮೀಪ ಉದ್ಯಾವರದಲ್ಲಿ ನಾಲ್ಕು ಲಾರಿಗಳನ್ನು ಬುಧವಾರ ರಾತ್ರಿ ಪೊಲೀಸರು ಈ ಕಾರಣಕ್ಕೆ ವಶಕ್ಕೆ ಪಡೆದಿದ್ದಾರೆ.
16 ಚಕ್ರದ ಮೂರು ಲಾರಿ, ಒಂದು ಟಿಪ್ಪರ್ ವಶಕ್ಕೆ ಪಡೆಯಲಾಗಿದ್ದು, ಟ್ರಿಪ್ ಶೀಟ್, ಟನ್ ಜಿಪಿಎಸ್ ರಹಿತವಾಗಿ ಜಲ್ಲಿಕಲ್ಲು, ಎಂಸ್ಯಾಂಡ್ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಅಡ್ಡಾದಿಡ್ಡಿ ಟಿಪ್ಪರ್ ಚಲಾಯಿಸಿದ ಪರಿಣಾಮ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು ಸ್ಕೂಟರ್ ಸವಾರ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.