ಜುಲೈಯಲ್ಲಿ ಕಾಣೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳ ಫೋಟೊ ಬಹಿರಂಗ
ಇಂಫಾಲ : ಹಿಂಸಾತ್ರಸ್ತ ಮಣಿಪುರದಲ್ಲಿ ಕಳೆದ ಜುಲೈನಿಂದೀಚೆಗೆ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಚಿತ್ರಗಳು ಬಹಿರಂಗಗೊಂಡ ಬಳಿಕ ಹತ್ಯೆಯಾಗಿರುವ ವಿಚಾರ ತಿಳಿದುಬಂದಿದೆ.
ಚಿತ್ರಗಳಲ್ಲಿ ವಿದ್ಯಾರ್ಥಿಗಳಿಬ್ಬರ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳ ಮೃತದೇಹಗಳನ್ನು ತೋರಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಮಣಿಪುರ ಸರ್ಕಾರ ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ. ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇನ್ನೂ ಪತ್ತೆಯಾಗದಿದ್ದರೂ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಸರ್ಕಾರ ಹೇಳಿದೆ.
ಹತ್ಯೆಯಾದವರು ಮೈಟಿ ಸಮುದಾಯದ ವಿದ್ಯಾರ್ಥಿಗಳು. ಅವರನ್ನು 17 ವರ್ಷದ ಹಿಜಾಮ್ ಲಿಂಥೋಯಿಂಗಂಬಿ ಮತ್ತು 20 ವರ್ಷದ ಫಿಜಾಮ್ ಹೇಮ್‌ಜಿತ್ ಎಂದು ಗುರುತಿಸಲಾಗಿದೆ.
ಜುಲೈನಲ್ಲಿ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೇಮ್‌ಜಿತ್ ಎಂಬ ಇಬ್ಬರು ವಿದ್ಯಾರ್ಥಿಗಳು ಕಾಣಿಸಿಕೊಂಡಿದ್ದರು. ಅಂದಿನಿಂದ ಆತನ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದೀಗ ಇದ್ದಕ್ಕಿದ್ದಂತೆ ಅವರ ಮೃತದೇಹದ ಫೋಟೊ ಹೊರಬಿದ್ದಿದೆ.
ಮೊದಲ ಫೋಟೋದಲ್ಲಿ, ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೆಮ್ಜಿತ್ ಕುಳಿತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ಹಿಜಾಮ್ ಬಿಳಿ ಟಿ ಶರ್ಟ್ ಮತ್ತು ಫಿಜಾಮ್ ಹೇಮ್‌ಜಿತ್ ಚೆಕ್ ಶರ್ಟ್ ಧರಿಸಿದ್ದಾರೆ. ಅವರ ಹಿಂದೆ ಬಂದೂಕು ಹಿಡಿದ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ.
ಎರಡನೇ ಫೋಟೋದಲ್ಲಿ ಇಬ್ಬರು ವಿದ್ಯಾರ್ಥಿಗಳ ದೇಹಗಳು ಪೊದೆಗಳ ನಡುವೆ ಬಿದ್ದಿರುವುದು ಕಂಡುಬರುತ್ತದೆ. ಆದಾಗ್ಯೂ ಎರಡು ಶವಗಳು ಮಣಿಪುರದ ಯಾವ ಪ್ರದೇಶದಲ್ಲಿವೆ ಎಂಬುದು ಇನ್ನೂ ತಿಳಿದುಬಂದಿಲ್ಲ.