ಬಿಜೆಪಿಗರ ಪ್ರವೃತ್ತಿಯಿಂದ ಜನ ರೋಸಿ ಹೋಗಿದ್ದಾರೆ – ಲಕ್ಷ್ಮೀ ಹೆಬ್ಬಾಳ್ಕರ್
ಕಾರ್ಕಳ : ಪ್ರಧಾನಿ ಮೋದಿ ಅವರಿಗೆ ಮಹಿಳೆಯರ ಬಗ್ಗೆ ಕಾಳಜಿಯಿರುತ್ತಿದ್ದಲ್ಲಿ 2014ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುತ್ತಿದ್ದರು. ಅವರಿಗೆ ಹೃದಯ ಇಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಮೀಸಲಾತಿ ಹಿಂದಿನ ಅಜೆಂಡಾ ಸ್ಪಷ್ಟವಾಗಿದ್ದು ಇದು ಓಟಿಗಾಗಿ ನಾಟಕ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಕುಟುಕಿದ್ದಾರೆ. ಅವರು ಕಾರ್ಕಳ ದಾನಶಾಲೆಯ ಪ್ರವಚನ ಮಂದಿರದಲ್ಲಿ ಸೆ. 23 ರಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಕಳೆದ ಬಾರಿ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಬಿಜೆಪಿಯವರು ಚುನಾವಣೆ ಗೆದ್ದರು. ಬಿಜೆಪಿ ಆಡಳಿತಕ್ಕೆ ಬಂದರೆ ಸರ್ವಾಧಿಕಾರ ಧೋರಣೆ ಮುಂದುವರಿಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಬಹಿರಂಗಪಡಿಸಿದೆ ಎಂದು ಮೊಯ್ಲಿ ಹೇಳಿದರು.
ಮೀಸಲಾತಿ ನೀಡಿದ ಪ್ರಥಮ ರಾಜ್ಯ ಕರ್ನಾಟಕ
ಮಹಿಳೆಯರಿಗೆ 33 % ಮೀಸಲಾತಿ ನೀಡಬೇಕೆಂದು ನಾನು ಕೇಂದ್ರ ಸಚಿವನಾಗಿದ್ದಾಗಲೇ ಮಸೂದೆ ತಂದು ರಾಜ್ಯ ಸಭೆಯಲ್ಲಿ ಪಾಸ್ ಮಾಡಿದ್ದೆ ಎಂದು ತಿಳಿಸಿದ ಮೊಯ್ಲಿ ಅವರು ಪ್ರಪ್ರಥಮವಾಗಿ 1993ರಲ್ಲಿ ಗ್ರಾ. ಪಂ. ಚುನಾವಣೆಯಲ್ಲಿ 53% ಮಹಿಳೆಯರು ಆಯ್ಕೆಯಾಗಿದ್ದರು. ಮೊದಲಾಗಿ ಮಹಿಳಾ ಮೀಸಲಾತಿ ನೀಡಿದ ರಾಜ್ಯ ಎಂದರೆ ಕರ್ನಾಟಕ. ಸೋನಿಯಾ ಗಾಂಧಿಯವರ ಆಶಯದಂತೆ ದೇಶದಲ್ಲೂ ಮಹಿಳಾ ಮೀಸಲಾತಿ ತರಲಾಗಿತ್ತು ಎಂದು ಮೊಯ್ಲಿ ಹೇಳಿದರು.
ಕಿತ್ತೊಗೆಯಬೇಕಿದೆ
ಶೋಷಣೆಗೊಳಗಾದವರು, ಅಲ್ಪ ಸಂಖ್ಯಾತರು, ಬಡವರು ಒಟ್ಟಾಗಿ ಮೋದಿ ಸರಕಾರ ಕಿತ್ತೊಗೆಯುವ ಕಾರ್ಯ ಮಾಡಬೇಕಿದೆ ಎಂದು ಮೊಯ್ಲಿ ಹೇಳಿದರು. ಪ್ರಚೋದನಕಾರಿ ಭಾಷಣ ಮಾಡಿ ಜನರ ತಲೆ ಒಡೆಯುವುದೇ ಬಿಜೆಪಿಯವರ ಕೆಲಸ. ಆದರೆ, ಇಲ್ಲಿ ತಲೆ ಒಡೆಯುವವರು, ತಲೆ ಒಡೆಸಿಕೊಂಡವರು, ಜೈಲಿಗೆ ಹೋಗುವುದು ಎಲ್ಲಾ ಹಿಂದುಳಿದ ವರ್ಗದವರು ಎಂಬ ಸತ್ಯ ಸಮಾಜ ಅರಿಯಬೇಕೆಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುವೆ. ನಾನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳುವ ಮೂಲಕ ಮೊಯ್ಲಿ ತಮ್ಮ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದರು.
ಜೆಡಿಎಸ್‌ಗೆ ರಾಜಕೀಯ ದಾರಿದ್ರ್ಯ
ಜೆಡಿಎಸ್ ನವರು ಮೊನ್ನೆ ಮೊನ್ನೆಯವರೆಗೆ ಬಿಜೆಪಿಯವರ ಜೊತೆ ಹೋಗಲು ದಾರಿದ್ರ್ಯ ಬಂದಿಲ್ಲ ಎಂದು ಹೇಳುತ್ತಿದ್ದರು. ಈಗ ಬಿಜೆಪಿ ಜೊತೆ ಹೋಗಿದ್ದಾರೆ. ಜೆಡಿಎಸ್ ನವರಿಗೆ ರಾಜಕೀಯ ದಾರಿದ್ರ್ಯ ಬಂದಿದೆ ಎಂದು ಮೊಯ್ಲಿ ತಿಳಿಸಿದರು.
100 ದಿನದಲ್ಲಿ ಶೇ. 90 ಭರವಸೆ ಈಡೆರಿಕೆ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿಕೊಂಡು ಬಂದಿದೆ. ಆಡಳಿತ ವಹಿಸಿಕೊಂಡು 100 ದಿನದ ಒಳಗಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಶೇ. 90 ಆಶ್ವಾಸನೆ ಈಡೇರಿಸಿದೆ ಎಂದು ಮೊಯ್ಲಿ ತಿಳಿಸಿದರು.
ಸೋಲಿಗೆ ಭಯಪಡಲಾರೆವು – ಲಕ್ಷ್ಮೀ ಹೆಬ್ಬಾಳ್ಕರ್
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದಾಗ್ಯೂ ಕಾಂಗ್ರೆಸ್‌ಗೆ ದ.ಕ., ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿಲ್ಲ. ಉಡುಪಿ ಜಿಲ್ಲೆಯಲ್ಲಿ ನಾವು ವನವಾಸ ಅನುಭವಿಸುತ್ತಿದ್ದೇವೆ. ಸೋಲಿಗೆ ನಾವು ಭಯಪಡುವುದಿಲ್ಲ. ಬಿಜೆಪಿಯವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಇಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬಿಜೆಪಿ ಪ್ರವೃತ್ತಿ
ದ್ವೇಷದ ಕಿಚ್ಚು ಹಚ್ಚಿ ಅದನ್ನು ಮತವನ್ನಾಗಿ ಪರಿವರ್ತಿಸುವ ಬಿಜೆಪಿಗರ ಪ್ರವೃತ್ತಿಯಿಂದ ಜನ ರೋಸಿ ಹೋಗಿದ್ದಾರೆ. ಇದಕ್ಕೆ ಕಾರ್ಕಳವೂ ಹೊರತಲ್ಲ. ಕೇವಲ ನಾಲ್ಕು ಬೂತ್ ಕೈ ಹಿಡಿದಿದ್ದರೆ ಕಾರ್ಕಳದಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸುತ್ತಿತ್ತು ಎಂದು ಲಕ್ಷ್ಮೀ ಹೇಳಿದರು.
93 ಶೇ. ಜನರಿಗೆ ಗೃಹಲಕ್ಷ್ಮಿ
ಕಾಂಗ್ರೆಸ್ ಪಕ್ಷ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ಉಡುಪಿ ಜಿಲ್ಲೆಯಲ್ಲಿ 93% ಜನರಿಗೆ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಬಂದಿದೆ. ಬ್ಯಾಂಕ್ ವ್ಯವಹಾರ ಮಾಡದಿರುವ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಕಾರಣದಿಂದಾಗಿ ಎಲ್ಲರಿಗೂ ಈ ಯೋಜನೆ ಪ್ರಯೋಜನ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಆದರೆ, ಅದೆಲ್ಲವೂ ಬಗೆಹರಿಯಲಿದೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯರಿಗೆ ಮಾತ್ರ
ಕೊಟ್ಟ ಭರವಸೆ ಈಡೇರಿಸುವ ಸಾಮರ್ಥ್ಯವಿರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರಿಗೆ ಮಾತ್ರ. ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಎಲ್ಲ ಧರ್ಮಗಳ ಮುಖಂಡರಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಪಕ್ಷವನ್ನು ಸದೃಢಗೊಳಿಸುವುದರೊಂದಿಗೆ ಮುಂದಿನ ಲೋಕಸಭಾ ಚುನಾವಣೆ ಸಂಕಲ್ಪ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಉಭಯ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಉತ್ತಮ ವ್ಯವಸ್ಥಿತ ರೀತಿಯಲ್ಲಿ ಪಕ್ಷ ಸಂಘಟನೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೊದಲ ಕಾರ್ಯಕರ್ತರ ಸಭೆ ಕಾರ್ಕಳದಲ್ಲಿ ನಡೆಯುತ್ತಿದೆ. ಕಾರ್ಕಳದಲ್ಲಿ ಪಕ್ಷ ಸೋತ ಬಗ್ಗೆ ಯಾರೂ ಬೇಸರಪಡಬಾರದು. ರಾಜ್ಯದಲ್ಲಿ ನಾವು ಗೆದ್ದಿರುವ ಸಂತಸವಿರಲಿ. ಮುಂದಿನ ತಾ.ಪಂ. ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಬೇಕೆಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಮರೋಳಿ, ಮಮತಾ ಗಟ್ಟಿ, ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅನಿತಾ ಡಿಸೋಜಾ, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೇಖರ್ ಮಡಿವಾಳ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ನಿರೂಪಿಸಿ, ತಾ.ಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ ವಂದಿಸಿದರು.