ಲೋಕ ಶಾಂತಿಯ ಹರಿಕಾರ-ಮನುಕುಲದ ಮಹಾನ್ ಸಂತ

ಇಂದು ನಾರಾಯಣ ಗುರುಗಳ 169ನೇ ಜಯಂತಿ

ಜಾತಿ, ಧರ್ಮ, ಬಣ್ಣ, ಮೇಲು, ಕೀಳು ಎಂಬ ಅಜ್ಞಾನದ ಅಂಧಕಾರದಲ್ಲಿ ಸಮಾಜ ಮುಳುಗಿದ್ದ ಸಂದರ್ಭ ಸಾಮಾಜಿಕ ಚಿಂತನೆಯೊಂದಿಗೆ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಸುಧಾರಣೆಗಾಗಿ ಉದಯಿಸಿದ ಮಾನವ ರೂಪದ ಶಕ್ತಿ ಬ್ರಹ್ಮ ಶ್ರೀ ನಾರಾಯಣ ಗುರುಗಳು.

ಓಣಂ‌ ಹಬ್ಬದ ಸಂಭ್ರಮದಲ್ಲಿ ನಾಣುವಿನ ಜನನ

ಅಂದು ಎಲ್ಲೆಡೆ ಓಣಂ‌ ಹಬ್ಬದ ಸಂಭ್ರಮ. 1855ರಲ್ಲಿ ಶತಭಿಷ ನಕ್ಷತ್ರದ‌ ಅಮೃತ ಘಳಿಗೆಯಲ್ಲಿ ಕೇರಳದ ತಿರುವನಂತಪುರದ ಚೆಂಬಳತಿ ಗ್ರಾಮದಲ್ಲಿ ಈಳವ ಸಮುದಾಯದ ಮಾಡನ್ ಆಶಾನ್ ಮತ್ತು ಕುಟ್ಟಿ ಅಮ್ಮಾಳ್ ದಂಪತಿಗೆ ಒಂದು ಗಂಡು ಮಗು ಜನಿಸಿತು. ಆ‌ ಮಗುವೇ ಇಂದು ಲೋಕದೆಲ್ಲೆಡೆ ಮಾನವ ಧರ್ಮದ‌ ಬೋಧಕನಾಗಿ ಆರಾಧಿಸುವ ನಾರಾಯಣ ಗುರುಗಳು. ಮಗುವಿಗೆ ನಾರಾಯಣ ಎಂದು ನಾಮಕರಣ ಮಾಡಿದ್ದರು. ಆದರೆ ಅವರನ್ನು ಎಲ್ಲರೂ ಪ್ರೀತಿಯಿಂದ ನಾಣು ಎಂದೇ ಕರೆಯುತ್ತಿದ್ದರು.

ಎಳವೆಯಲ್ಲೇ‌ ಅಂತರ್ಗತವಾಗಿತ್ತು ಅಹಿಂಸಾ ತತ್ವ

ತುಂಟನಾಗಿದ್ದ ನಾಣು‌ ಎಳೆ‌ ವಯಸ್ಸಿನಲ್ಲೇ‌ ಸಾಮಾಜಿಕ ಮೌಢ್ಯಗಳ‌ ಬಗ್ಗೆ ಪ್ರಶ್ನಿಸುವ ಗುಣ ಹೊಂದಿದ್ದರು. ಒಂದೊಮ್ಮೆ ನಾಣುವಿನ‌ ಸ್ನೇಹಿತರು ಸನ್ಯಾಸಿಯೊಬ್ಬರಿಗೆ ಕಲ್ಲಿನಿಂದ ಹೊಡೆಯುತ್ತ ‌ಹಿಂಸಿಸುತ್ತಿದ್ದ ಸಂದರ್ಭ ಅದನ್ನು ತಡೆಯಲು ಸಾಧ್ಯವಾಗದೆ ಅಳುತ್ತಿದ್ದ ನಾಣುವನ್ನು ಕಂಡು ಸನ್ಯಾಸಿ ಹೀಗೆ ಹೇಳಿದ್ದರು, ನೀನು‌ ಅಶಕ್ತನಲ್ಲ. ಈ ಜಗತ್ತಿನಲ್ಲಿ ಯಾರೂ ಮಾಡದ ಕಾರ್ಯವನ್ನು ನೀನು ಮಾಡುವೆ‌ ಮತ್ತು ಮಹಾತ್ಮನಾಗುವೆ ಎಂದು ಹರಸಿದ್ದರು.

ನಾಣುವಿನ‌ ಜ್ಞಾನದಾಹದಲ್ಲಿತ್ತು ಲೋಕದ ಹಿತ

5ನೇ ವರ್ಷಕ್ಕೆ ವಿಜಯ ದಶಮಿಯಂದು ನಾಣುವಿಗೆ ಖ್ಯಾತ ವಿದ್ವಾಂಸ ಪಿಳ್ಳೆ ಅವರಿಂದ ಅಕ್ಷರ ಅಭ್ಯಾಸ ನಡೆಯಿತು. ಮಲೆಯಾಳಂ, ಸಂಸ್ಕೃತ ಕಲಿಕೆಯೊಂದಿಗೆ ಸಿದ್ಧರೂಢ, ಬಾಲಪ್ರಬೋಧನಂ, ಅಮರಕೋಶಗಳನ್ನು ಕಲಿತ ನಾಣು ಮಾವ ಕೃಷ್ಣ ವೈದ್ಯರ ಬಳಿ ಇದ್ದ ಮಹಾಭಾರತ, ರಾಮಾಯಣದಂತಹ ಧಾರ್ಮಿಕ ಗ್ರಂಥಗಳನ್ನು ಅಭ್ಯಸಿಸಿದ್ದರು.

14 ನೇ ವಯಸ್ಸಿನಲ್ಲಿ‌ ನಾಣುವಿನ ತಾಯಿ ಇಹಲೋಕ ತ್ಯಜಿಸಿದಾಗ ಶಿಕ್ಷಣ ಸ್ಥಗಿತಗೊಂಡಿತು. ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿದ ಬಾಲಕ ಮುಂದೆ 7 ವರ್ಷಗಳ ಬಳಿಕ ಮಾವನ ನೆರವಿನೊಂದಿಗೆ ಶಿಕ್ಷಣ‌ ಮುಂದುವರಿಸಿದರು. ತರವಾಡಿನ‌ ಶ್ರೀರಾಮನ್ ಪಿಳ್ಳೆ ಆಶಾನ್ ಅವರ ಬಳಿ ಶಿಕ್ಷಣ ಪಡೆದ ನಾಣು ಅವರ ಮಾರ್ಗದರ್ಶನದಂತೆ ಪಾಠ, ವ್ಯಾಕರಣ, ಕಾವ್ಯ, ಜ್ಯೋತಿಷ, ಧ್ಯಾನ, ಪುರಾಣಗಳ‌ ಅಧ್ಯಯನದಿಂದ ಸರಳ ಜೀವನ, ಸಾಮಾಜಿಕ ನ್ಯಾಯ, ಸಮಾನತೆಯ ತತ್ವವನ್ನು ಮೈಗೂಡಿಸಿಕೊಂಡಿದ್ದರು.

ನಾಣು ನಾರಾಯಣ ಗುರುವಾದರು

ಅನಿವಾರ್ಯ ಕಾರಣಗಳಿಂದ ಶಿಕ್ಷಣದಿಂದ ಮತ್ತೆ ಹುಟ್ಟೂರಿಗೆ ಬಂದ ನಾಣು‌ವಿಗೆ ತಾನು ಕಲಿತ ವಿದ್ಯೆಯನ್ನು ಹಂಚುವ ಹಂಬಲ‌ ಉಂಟಾಯಿತು. ಕಡಕಾವೂರು, ಮೀನಕಡವು ಮೊದಲಾದ ಕಡೆ‌ ಶಾಲೆಗಳನ್ನು ತೆರೆದು ಆಧ್ಯಾತ್ಮಿಕ ವಿಷಯಗಳನ್ನು ಬೋಧಿಸುವ ಮೂಲಕ ಅಜ್ಞಾನದ ಅಂಧಕಾರವನ್ನು ದೂರ ಮಾಡಲು ಪ್ರಯತ್ನಿಸಿದರು. ತನ್ನೊಳಗಿರುವ ಲೋಕ ಶಾಂತಿಯ ವಿಚಾರಗಳನ್ನು ಧಾರೆಯೆರೆಯುವ ಮೂಲಕ ನಾಣು ನಾರಾಯಣ ಗುರುವಾದರು.

ಅರಿವಿನ ಗುರು

ನಮ್ಮೊಳಗೆ ಅರಿವು ಮೂಡಿದರೆ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ದೂರ ಮಾಡಬಹುದು ಎಂದು ಗುರುಗಳು ನಂಬಿದ್ದರು‌. ಇದಕ್ಕಾಗಿ ವಿದ್ಯೆಯನ್ನು ಅಸ್ತ್ರವನ್ನಾಗಿ ಬಳಸಿದ ಅವರು “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ತತ್ವ ಸಂದೇಶವನ್ನು ಜನರಿಗೆ ನೀಡಿದರು. ಶಿಕ್ಷಣದ‌ ಮೂಲಕ ಶೋಷಿತರ ಸರ್ವಾಂಗೀಣ ಅಭಿವೃದ್ಧಿ ಅವರ ಉದ್ದೇಶವಾಗಿತ್ತು.

ಒಂದೇ ಜಾತಿ,‌ ಒಂದೇ ಮತ, ಒಬ್ಬರೇ ದೇವರು

ಎಲ್ಲ ಧರ್ಮಗಳ ಸಾರ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳು ದೇವರ ಹೆಸರಿನಲ್ಲಿ ಮೇಲ್ವರ್ಗ-ಕೆಳವರ್ಗ ಎಂಬ ಸಂಘರ್ಷ ನಡೆದಾಗ ಶಿವ ದೇವಾಲಯವನ್ನು ನಿರ್ಮಿಸಿ ಅಸ್ಪೃಶ್ಯರಿಗೆ ಪೂಜೆ ಮಾಡಲು ಮುಕ್ತ ಅವಕಾಶ ನೀಡಿದರು. ಇದಕ್ಕೆ‌ ವಿರೋಧಗಳು ಎದುರಾದಾಗ “ನಾನು ಶೂದ್ರ ಸ್ವಾಮೀಜಿ, ನಾನು ಸ್ಥಾಪಿಸಿದ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ಶಿವನೂ ಶೂದ್ರ ಶಿವ‌. ಅದ್ದರಿಂದ ಶೂದ್ರ ಶಿವನನ್ನು ಶೂದ್ರರೆಲ್ಲರೂ ಪೂಜಿಸಬಹುದು” ಎಂದ ಅವರು ಧಾರ್ಮಿಕ‌ ನಂಬಿಕೆಯಲ್ಲಿ ಸಮಾಜೋದ್ಧಾರ ಮಾಡಿದರು. 60ಕ್ಕೂ ಅಧಿಕ ದೇವಾಲಯಗಳನ್ನು ಗುರುಗಳು ಸ್ಥಾಪಿಸಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯವು ನಾರಾಯಣ ಗುರುಗಳ‌ ನೇತೃತ್ವದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡಿದೆ‌ ಎಂಬುದು ವಿಶೇಷ.

ಎಸ್ಎನ್‌ಡಿಪಿ ಸ್ಥಾಪನೆ

ವರ್ಕುಲದ ಶಿವಗಿರಿ ಬೆಟ್ಟದಲ್ಲಿ ಗುರುಗಳು ಸ್ಥಾಪಿಸಿದ ಮಠದಲ್ಲಿ 1904ರಲ್ಲಿ ಸಮಾನತೆಯ ಸಂದೇಶ ಸಾರುವ ಶ್ರೀ‌ ನಾರಾಯಣ ಧರ್ಮಪರಿಪಾಲನ ಯೋಗಂ ಎಂಬ ಕೇಂದ್ರವನ್ನು ಪ್ರಾರಂಭ ಮಾಡಲಾಯಿತು. 1912ರಲ್ಲಿ ಶಿವಗಿರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದರು‌. ಇಲ್ಲಿ ಎಲ್ಲ ಸಮುದಾಯದವರಿಗೆ ಸಮಾನ ಶಿಕ್ಷಣವನ್ನು ಗುರುಗಳು ಧಾರೆಯೆರೆದರು.

ಆಧುನಿಕ ಸೃಷ್ಟಿಕರ್ತ

ಶಿವಗಿರಿಯಲ್ಲಿರುವ ನಾರಾಯಣ ಗುರುಗಳ ಆಶ್ರಮಕ್ಕೆ‌ ಭೇಟಿ‌ ನೀಡಿದ್ದ ಮಹಾತ್ಮ ಗಾಂಧೀಜಿಯವರು “ನಾನು ಸೃಷ್ಟಿಕರ್ತ ಎಂದರೆ ಬ್ರಹ್ಮ‌ದೇವ ಮಾತ್ರ ಎಂದು ತಿಳಿದಿದ್ದೆ. ಆದರೆ ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ನನಗರ್ಥವಾಯಿತು ಜಗತ್ತಿನಲ್ಲಿ ಮತ್ತೊಬ್ಬ ಸೃಷ್ಟಿಕರ್ತನಿದ್ದಾನೆ. ಆತನ ಹೆಸರು ಬ್ರಹ್ಮ ಶ್ರೀ ನಾರಾಯಣ ಗುರುಗಳು” ಎಂದಿದ್ದರಂತೆ.

20 ಸೆಪ್ಟೆಂಬರ್ 1928ರಂದು ತಮ್ಮ 72ನೇ ವಯಸ್ಸಿನಲ್ಲಿ ಶಿವಗಿರಿಯಲ್ಲಿ ನಾರಾಯಣ ಗುರುಗಳು ಯೋಗ ನಿದ್ರೆಗೆ ಜಾರಿದರು. ದೇವರ ಆರಾಧನೆಯಿಂದ ವಂಚಿತರಾದವರಿಗೆ ದೇವರನ್ನು ಕೊಟ್ಟ ನಾರಾಯಣ ಗುರುಗಳು ಇಂದು‌ ಮಾನವ ರೂಪದ ದೇವರಾಗಿ, ಸಮಾಜ ಸುಧಾರಕರಾಗಿ, ಲೋಕ ಶಾಂತಿಯ ಹರಿಕಾರನಾಗಿ, ಮನುಕುಲದ ಸಂತನಾಗಿ, ಆಧುನಿಕ ಸೃಷ್ಟಿಕರ್ತನಾಗಿ ಆರಾಧಿಸಲ್ಪಡುತ್ತಿದ್ದಾರೆ.
✒️ ನಳಿನಿ ಎಸ್. ಸುವರ್ಣ































































































error: Content is protected !!
Scroll to Top