ಸರಕಾರದ ಗಮನಕ್ಕೆ ತಾರದೆ ಸುತ್ತೋಲೆ ಹೊರಡಿಸಲಾಗಿತ್ತು ಎಂಬ ಸಮಜಾಯಿಸಿ
ಬೆಂಗಳೂರು: ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಗೊಳಿಸಬಾರದು ಎಂದು ಸೂಚಿಸಿದ್ದ ಸುತ್ತೋಲೆಯನ್ನು ಸರಕಾರ ಪ್ರತಿಭಟನೆಗೆ ಅಂಜಿ ಹಿಂಪಡೆದಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಮಂಜೂರು ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ಮುಜರಾಯಿ ಇಲಾಖೆ ಜಿಲ್ಲಾಧಿಕಾರಿಗಳೀಗೆ ಸುತ್ತೋಲೆ ಹೊರಡಿಸಿತ್ತು. ಇದಕ್ಕೆ ಹಿಂದುಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳಿಗೆ ಈ ವಿಚಾರ ಅಸ್ತ್ರವಾಗಬಹುದು ಎಂದು ಭಾವಿಸಿ ಸರಕಾರ ಕೂಡಲೇ ಸುತ್ತೋಲೆಯನ್ನು ಹಿಂದೆಗೆದಿದೆ.
2022-23ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದಂತೆ ಮುಜರಾಯಿ ಇಲಾಖೆ ಸೋಮವಾರ ಸುತ್ತೋಲೆ ಹೊರಡಿಸಿತ್ತು. ಸಚಿವರ ಗಮನಕ್ಕೆ ಬಾರದೆ ಈ ಆದೇಶ ಪ್ರಕಟಿಸಲಾಗಿದೆ. ಇದೀಗ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಮುಜರಾಯಿ ಇಲಾಖೆ ಸ್ಪಷ್ಟನೆ ನೀಡಿದೆ.































