ಬೆಲೆ ಕುಸಿದು ಮೀನುಗಾರರಿಗೆ ನಿರಾಶೆ
ಉಡುಪಿ : ಆಳ ಸಮುದ್ರ ಮೀನುಗಾರಿಕೆ ಆರಂಭವಾದ ಬೆನ್ನಿಗೆ ಮೀನುಗಾರರಿಗೆ ರಾಶಿ ರಾಶಿ ಮೀನುಗಳು ಸಿಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಬಂಗುಡೆ ಮತ್ತು ಬೂತಾಯಿ ಮೀನು ಯಥೇಚ್ಛವಾಗಿ ಸಿಕ್ಕಿದ್ದವು. ಇದೀಗ ಬೊಂಡಾಸ್ ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರಿಗೆ ಬಂಪರ್ ಹೊಡೆದಿದೆ. ಆದರೆ ಬೆಲೆ ಕಡಿಮೆಯಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ಮಾತ್ರ ಸಿಗುತ್ತಿಲ್ಲ.
ಬೋಟ್‌ಗಳು ಅಕ್ಟೋಪಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿವೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಯೇ ಕಾಣಸಿಗುತ್ತದೆ. ಸಾಮಾನ್ಯ ದಿನಗಳಲ್ಲಿ ಬೊಂಡಾಸ್ ಕಿಲೋಗೆ 400 ರೂ. ರಷ್ಟಿತ್ತು. ಸದ್ಯ ಬಂಡಾಸ್ಧಾರಾಳವಾಗಿ ಬರುತ್ತಿರುವುದರಿಂದ 70 ರಿಂದ 90 ರೂ.ಗೆ ಇಳಿದಿದೆ.
ಹಿಂದೆ ಬೊಂಡಾಸ್ ಮೀನಿಗೆ ವಿದೇಶದಲ್ಲಿ ಅಪಾರ ಬೇಡಿಕೆ ಇದ್ದು, ಯುರೋಪ್ ದೇಶಗಲ್ಲಿ ಉತ್ತಮ ಬೆಲೆ ಸಿಗುತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಯುರೋಪ್ ದೇಶಗಳಲ್ಲಿ ಬೇಡಿಕೆ ಕುಸಿತವಾಗಿರುವುದರಿಂದ ಇದೀಗ ಅಪಾರ ಪ್ರಮಾಣದಲ್ಲಿ ಸಿಕ್ಕಿರುವ ಬಂಡಾಸನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿಯಲ್ಲಿ ಮೀನುಗಾರರು ಇದ್ದಾರೆ.
































