ಪ್ರಕೃತಿ ಜತೆಗಿನ ಸ್ಪರ್ಶದಿಂದ ಮನುಷ್ಯ ದೂರ : ಅಮೈ ಮಹಾಲಿಂಗ ನಾಯ್ಕ

ಕೌಡೂರು ಯುವ ಸಂಗಮದ ಕೆಸರ್‌ದ ಕಸರತ್ತ್-ತುಳುನಾಡ ಗೊಬ್ಬುದ ಪಂತೊಲು

ಬೈಲೂರು : ಹಿಂದಿನ ಕಾಲದಲ್ಲಿ ಹಿರಿಯರು ಕಿರಿಯರೆನ್ನದೆ ಎಲ್ಲರೂ ಬೇಸಾಯದ ಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ಕೃಷಿ ಸಂಸ್ಕೃತಿ ಮರೆಯಾಗಿ ಕೆಸರು ಗದ್ದೆಗೆ ಇಳಿಯುವವರೇ ಇಲ್ಲದಂತಾಗಿದೆ. ಹಿಂದಿನವರು ಇಡೀ ದಿನ ಕೆಸರು ಗದ್ದೆಯಲ್ಲಿದ್ದರೂ ರೋಗವಿಲ್ಲದೆ ಬದುಕುತ್ತಿದ್ದರು, ಈಗ ಐದು ನಿಮಿಷ ನೀರಿನಲ್ಲಿ ನೆನೆದರೂ ಶೀತ ನೆಗಡಿ ಎಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪ್ರಕೃತಿ ಜತೆಗಿನ ಸ್ಪರ್ಶದಿಂದ ನಾವು ದೂರವಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಆಧುನಿಕ ಭಗೀರಥ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಹೇಳಿದರು.
ಮಂಗಳವಾರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಸ್ಥಾನ ಬಾಣಲ್ ಕೌಡೂರು ಇಲ್ಲಿ ಯುವ ಸಂಗಮ ಕೌಡೂರು ಆಯೋಜಿಸಿದ ಕೆಸರ್‌ದ ಕಸರತ್ತ್-ತುಳುನಾಡ ಗೊಬ್ಬುದ ಪಂತೊಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬಹಳಷ್ಟು ಯುವಕ ಮಂಡಲಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಷ್ಟು ಅಗಾಧ ಸಂಖ್ಯೆಯಲ್ಲಿ ಜನ ಸೇರಿದ್ದು ಇಲ್ಲಿಯೇ ಎಂದು ಯುವ ಸಂಗಮ ಕೌಡೂರು ಸಂಘದ ಪ್ರಯತ್ನವನ್ನು ಶ್ಲಾಘಿಷಿದರು.
ಕೆಸರು ಗದ್ದೆಯಲ್ಲಿ ವಾಲಿಬಾಲ್‌, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಮೂರು ಕಾಲಿನ ಓಟ ಮುಂತಾದ ಸ್ಪರ್ಧೆಗಳು ಜರುಗಿದವು. ಪ್ರಗತಿಪರ ಕೃಷಿಕ ಕುಮೇರುಮನೆ ಸದಾನಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಎಟ್ಟಿ ಚಟ್ನಿ, ಪುಂಡಿ ಮರುವಾಯಿ, ಕೋರಿ ಸುಕ್ಕ, ಮೆತ್ತೆದ ಗಂಜಿ ಸೇರಿದಂತೆ ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಭೋಜನವಿತ್ತು. ಸಾವಿರಕ್ಕೂ ಅಧಿಕ ಜನ ಭಾಗವಹಿಸಿದರು.
ಅರ್ಚಕ ನಾರಾಯಣ ಭಟ್ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ಮಾಡಿದರು. ಅತಿಥಿಗಳಾಗಿ ನಟ ವಿನೀತ್ ಕುಮಾರ್, ನಿರ್ದೇಶಕ ರಾಹುಲ್ ಅಮೀನ್, ಸಂಘದ ಗೌರವ ಸಲಹೆಗಾರ ಹರಿಜೀವನ್ ಹೆಗ್ಡೆ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಬೈಲೂರು ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಸುಮಿತ್ ಶೆಟ್ಟಿ ಕೌಡೂರು ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಕೌಡೂರು ವಂದಿಸಿದರು. ನವೀನ್ ಶೆಟ್ಟಿ ಎಡಮೆರ್ ನಿರೂಪಿಸಿದರು. ಶ್ರೀಕಾಂತ್‌ ಪ್ರಭು ಪಳ್ಳಿ ಕೆಸರು ಗದ್ದೆ ಸ್ಪರ್ಧೆಗಳನ್ನು ನಿರೂಪಿಸಿದರು.































































error: Content is protected !!
Scroll to Top