ಬಿಜೆಪಿಗೇ ಶಾಕ್ ಕೊಟ್ಟ ಬಿಜೆಪಿ ಬೆಂಬಲಿತ ಸದಸ್ಯರು

ಕುಕ್ಕುಂದೂರು ಗ್ರಾ. ಪಂ. ನಲ್ಲೊಂದು ಅಪೂರ್ವ ವಿದ್ಯಮಾನ

ಅಡ್ಡ ಮತದಾನ ಮಾಡಿದವರ ಬಗ್ಗೆಯೇ ಹೆಚ್ಚಿದ ಕುತೂಹಲ

ಕಾರ್ಕಳ : ತಾಲೂಕಿನ ಅತಿ ದೊಡ್ಡ ಪಂಚಾಯತ್‌ ಎಂದು ಗುರುತಿಸಿಕೊಂಡಿರುವ ಕುಕ್ಕುಂದೂರಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆಯೇ ಹೆಚ್ಚಿದ್ದರೂ ಅಧಿಕಾರ ಮಾತ್ರ ಕಾಂಗ್ರೆಸ್‌ ಪಾಲಾಗಿದೆ. ಒಟ್ಟು 33 ಮಂದಿ ಸದಸ್ಯರಿರುವ ಈ ಪಂಚಾಯತ್‌ನಲ್ಲಿ 21 ಮಂದಿ ಬಿಜೆಪಿ, 12 ಮಂದಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದರು. ವಿಧಾನ ಸಭಾ ಚುನಾವಣಾ ಸಂದರ್ಭ ಪಂಚಾಯತ್‌ ಉಪಾಧ್ಯಕ್ಷ ಅನಿಲ್‌ ನೆಲ್ಲಿಗುಡ್ಡೆ ಹಾಗೂ ರಮೇಶ್‌ ಪರಪು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ರಮಾನಾಥ ನಾಯಕ್‌ ಪಕ್ಷೇತರ ಅಭ್ಯರ್ಥಿ ಮುತಾಲಿಕ್‌ ಟೀಮ್‌ ನಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ಬಿಜೆಪಿ ಬೆಂಬಲಿತರ ಸಂಖ್ಯೆ 18ಕ್ಕೆ ಕುಸಿಯಿತು. ಆ. 16ರಂದು ಪಂಚಾಯತ್‌ ಅಧ್ಯಕ್ಷ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಇಬ್ಬರೂ ಅಭ್ಯರ್ಥಿಗಳು ತಲಾ 16 ಮತ ಪಡೆದಿದ್ದರು. ಹೀಗಾಗಿ ಬಿಜೆಪಿ ಬೆಂಬಲಿತ ಸದಸ್ಯರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸದೇ ಇರುವುದು ಸ್ಪಷ್ಟ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ 14 ಮತಗಳನ್ನು ಪಡೆದರೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ 16 ಮತಗಳನ್ನು ಪಡೆದರು. ಮೂರು ಮತಗಳು ಅಸಿಂಧುಗೊಂಡಿರುತ್ತದೆ.

ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಒಲಿದಿತ್ತು. ಬಿಜೆಪಿ ಬೆಂಬಲಿತ ಸದಸ್ಯರೇ ಅಧಿಕವಿದ್ದರೂ ಆ. 16 ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಾರ್ವಜನಿಕರಲ್ಲಿ ಅಡ್ಡ ಮತದಾನದ ಬಗ್ಗೆ ಕುತೂಹಲ ಮೂಡಿಸಿದೆ.

ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬಿಜೆಪಿ ಬೆಂಬಲಿತ ಸದಸ್ಯರೇ ಕೈ ಕೊಟ್ಟಿದ್ದಾರೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಶಾ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಉಷಾ ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಸಂತೋಷ್ ಅವರು ಕಣಕ್ಕಿಳಿದಿದ್ದರು. ಬಿಜೆಪಿ ಬೆಂಬಲಿತ ಕೆಲ ಸದಸ್ಯರು ಅಡ್ಡ ಮತದಾನ ಮಾಡಿರುವ ಪರಿಣಾಮ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ತಲಾ 16 ಮತಗಳನ್ನು ಪಡೆದರು. ಹೀಗಾಗಿ ಟಾಸ್‌ ಚಿಮ್ಮುವ ಮೂಲಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಟಾಸ್ ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಉಷಾ ಮೋಹನ್‌‌ ಪಾಲಾಯಿತು. ಈ ಮೂಲಕ ಕುಕ್ಕುಂದೂರು ಪಂಚಾಯತ್‌ ಕಾಂಗ್ರೆಸ್‌ ತೆಕ್ಕೆಗೆ ಒಲಿಯಿತು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿಶಾ ಅವರಿಗಿಂತ ಶಶಿಕಲಾ ಸಂತೋಷ್‌ ಅವರು ಮೂರು ಮತಗಳು ಹೆಚ್ಚು ಪಡೆದರು.

ಅಡ್ಡ ಮತದಾನ ಮಾಡಿದವರಾರು ?
ಪಕ್ಷದಲ್ಲೇ ಇದ್ದುಕೊಂಡು ಅಡ್ಡ ಮತದಾನ ಮಾಡಿದವರರಾದರೂ ಯಾರು ಎಂಬುದು ಪ್ರಶ್ನಾರ್ಥಕವಾಗಿದೆ. ಅಲ್ಲದೆ ಈ ರೀತಿ ಅಡ್ಡ ಮತದಾನಕ್ಕೆ ಕಾರಣವಾದರೂ ಏನಿರಬಹುದು ಎಂಬುದು ಚರ್ಚೆಗೆ ಗ್ರಾಸವಾಗಿದೆ. ಅಭ್ಯರ್ಥಿಗಳ ಮೇಲಿನ ಮುನಿಸೋ ಅಥವಾ ಪ್ರತಿ ಪಕ್ಷದವರ ಓಲೈಕೆಯೋ ಇಲ್ಲ ಮತ್ತಿನ್ನೇನಾದರೂ ಕಾರಣವಿರಬಹುದೇ ಎಂಬುದು ಚರ್ಚೆ ಕುಕ್ಕುಂದೂರು ಭಾಗದಲ್ಲಿ ಚರ್ಚೆಯಾಗುತ್ತಿದೆ.

8 ವರ್ಷಗಳ ಬಳಿಕ ಕೈ ಆಡಳಿತ
1994ರಿಂದ 2005 ಮಾರ್ಚ್‌ 17ರವರೆಗೆ ಕುಕ್ಕುಂದೂರು ಗ್ರಾ. ಪಂ. ನಲ್ಲಿ ಕಾಂಗ್ರೆಸ್‌ ಆಡಳಿತವಿತ್ತು. ಆ ನಂತರ ನಿರಂತರವಾಗಿ ಬಿಜೆಪಿ ಪಕ್ಷ ಆಡಳಿತವನ್ನು ನಡೆಸಿಕೊಂಡು ಬಂದಿದ್ದು, ಈ ಬಾರಿ ನಡೆಸಿದ ಅಡ್ಡಮತದಾನದಿಂದಾಗಿ ಮತ್ತೆ ಪಂಚಾಯತ್‌ ಆಡಳಿತ ಕಾಂಗ್ರೆಸ್‌ ಕೈ ಸೇರಿದೆ.













































































error: Content is protected !!
Scroll to Top