ಕಲಾಪದ ಮೌಲ್ಯ ಉಳಿಸುವ ಕಾರ್ಯವಾಗಲಿ
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಕುಳಿತುಕೊಳ್ಳುವ ಆಸನಗಳು ಬದಲಾಗಿದೆಯೇ ಹೊರತು ಅಧಿವೇಶನದ ಚಿತ್ರಣ, ಸದಸ್ಯರು ನಡೆದುಕೊಳ್ಳುವ ರೀತಿ ಏನೇನೂ ಬದಲಾಗಿಲ್ಲ. ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮೊದಲ ಅಧಿವೇಶನ ನಡೆಯುತ್ತಿದೆ. ಮುಂದಿನ ಐದು ವರ್ಷಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಬಹುದು ಎಂದು ನಿರೀಕ್ಷಿಸುವಂತಿಲ್ಲ.
ಅಧಿವೇಶನ ಎಂದರೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ದೋಷಾರೋಪಗಳು, ಜಟಾಪಟಿ, ವೈಯಕ್ತಿಕ ನಿಂದನೆ, ಕ್ಷುಲ್ಲಕ ವಿಷಯಕ್ಕೂ ಗದ್ದಲ ಎಬ್ಬಿಸುವುದು ಎಂಬ ಪರಿಸ್ಥಿತಿ ಸೃಷ್ಟಿಯಾಗಿ ಬಹಳ ಕಾಲ ಆಗಿದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅಥವಾ ಯಾವ ಪಕ್ಷ ವಿಪಕ್ಷವಾಗಿದ್ದರೂ ಕಲಾಪಗಳ ಸ್ಥಿತಿ ಒಂದೇ ರೀತಿ ಇರುತ್ತದೆ. ಚುನಾವಣೆ ಸಮಯದಲ್ಲಿ ಬೀದಿಯಲ್ಲಿ ಮಾಡುವ ಪ್ರಚಾರ ಭಾಷಣಕ್ಕೂ ಅಧಿವೇಶನದಲ್ಲಿ ಮಾತನಾಡುವ ರೀತಿಗೂ ವ್ಯತ್ಯಾಸ ಕಾಣುವುದಿಲ್ಲ. ಈಗೀಗ ಜನಪ್ರತಿನಿಧಿಗಳು ಚರ್ಚೆಯ ವೇಳೆ ಬಳಸುವ ಶಬ್ದ ಕೂಡ ಅಸಂವಿಧಾನಿಕವಾಗಿದೆ. ಏಕವಚನದ ನಿಂದನೆಯಂತೂ ಧಾರಾಳವಾಗಿ ಸುರಿಯುತ್ತಿದೆ.
ಆಡಳಿತ ಪಕ್ಷ ಮತ್ತು ವಿಪಕ್ಷದ ಅನೇಕ ಸದಸ್ಯರು ಪ್ರಸ್ತಾಪ ಮಾಡಿದ ವಿಷಯ ಮತ್ತು ಅವರು ಬಳಸಿದ ಭಾಷೆ ಸದನದ ಘನತೆಗೆ ತಕ್ಕುದಲ್ಲ ಎಂದು ಸ್ಪೀಕರ್ ಹಲವು ಬಾರಿ ಎಚ್ಚರಿಸಿದರೂ ಶಾಸಕರ ನಡವಳಿಕೆಯಲ್ಲಿ ಯಾವ ಸುಧಾರಣೆಯೂ ಕಂಡುಬರುತ್ತಿಲ್ಲ. ಸ್ಪೀಕರ್ ಯು.ಟಿ. ಖಾದರ್ ಅವರ ಸಜ್ಜನಿಕೆ ದುರುಪಯೋಗ ಆಗುತ್ತಿರುವುದು ಎದ್ದು ಕಾಣುತ್ತಿದೆ.

ವಿಪಕ್ಷ ನಾಯಕನಿಲ್ಲ
ಸದನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದೆ ಕಲಾಪಗಳನ್ನು ನಡೆಸಲಾಗುತ್ತಿದೆ. ಆಡಳಿತ ಪಕ್ಷದ ತಪ್ಪುಗಳನ್ನು ನೇರವಾಗಿ ಎತ್ತಿ ಹಿಡಿದು ತೋರಿಸುವ ಹೊಣೆ ಹೊತ್ತ ವಿಪಕ್ಷ ಅಧಿವೇಶನ ಆರಂಭದಿಂದ ಇಂದಿನವರೆಗೂ ಎತ್ತಿಕೊಂಡ ಯಾವ ವಿಷಯಗಳನ್ನೂ ಗುರಿ ಮುಟ್ಟಿಸಲು ಸಫಲವಾಗಿಲ್ಲ. ಬೊಮ್ಮಾಯಿ ಅವರಂತಹ ಉತ್ತಮ ಸಂಸದೀಯ ಪಟುಗಳು ಮಂಕಾಗಿದ್ದಾರೆ. ಆಕ್ರೋಶಭರಿತವಾಗಿ ವಾದ ಮಂಡಿಸುವ ಯತ್ನಾಳ್, ಅಶೋಕ್ ಈ ಬಾರಿ ಹೆಚ್ಚು ಮಾತಾಡಿದ್ದಾರೆ. ಹೊಸ ಶಾಸಕರು ಅನೇಕ ಮಂದಿ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡಲು ಪ್ರಯತ್ನಪಟ್ಟರೂ ಅದಕ್ಕೆ ಸಂಬಂಧಪಟ್ಟ ಸಚಿವರು ಹಾರಿಕೆಯ ಉತ್ತರ ಹೇಳಿ ಹೊಣೆ ಜಾರಿಸಿಕೊಂಡಿದ್ದಾರೆ.
ಸದನಲ್ಲಿ ಕದನ, ಗದ್ದಲ, ಕೋಲಾಹಲ, ವಾಕ್ಸಮರ, ಕಿಡಿಕಾರುವುದೇ ವಿಪಕ್ಷದ ಕಾರ್ಯ ಎನ್ನುವಂತೆ ಗೋಚರಿಸುತ್ತದೆ. ಇದರಿಂದ ಕಲಾಪದ ಮೂಲ ಉದ್ದೇಶ ಈಡೇರದೇ ಕೋಟಿಗಟ್ಟಲೆ ಹಣ ದುರುಪಯೋಗವಾಗುತ್ತಿದೆ. ಅನಗತ್ಯವಾದ ವಿಷಯಗಳನ್ನು ಹಿಡಿದುಕೊಂಡು ಮೂರೂ ಪಕ್ಷಗಳು ಬೊಬ್ಬೆ ಹಾಕಿದ್ದನ್ನು ಬಿಟ್ಟರೆ ಈ ಅಧಿವೇಶನದಲ್ಲಿ ರಾಜ್ಯದ ಜನರಿಗೆ ದೊರೆತ ಲಾಭವೇನು ? ಒಬ್ಬ ಸರಕಾರಿ ಬಸ್ಸಿನ ಚಾಲಕ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟ, ಇದಕ್ಕೆ ಒಬ್ಬ ಸಚಿವ ಕಾರಣ ಎಂದು ಆಪಾದನೆ ಮಾಡಿದ್ದ ಎಂಬ ವಿಷಯಕ್ಕೆ ಚರ್ಚೆ ನಡೆದು ಇಡೀ ದಿನ ಕಲಾಪ ವ್ಯರ್ಥ ಮಾಡಲಾಯಿತು. ಆಡಳಿತ ಪಕ್ಷ ವಿಚಾರಣೆಯ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪ ಮಾಡಿದ ವಿಪಕ್ಷದವರ ಮೇಲೆ ಆಡಳಿತ ಪಕ್ಷದ ಶಾಸಕರು ಮುಗಿಬಿದ್ದರು ಮತ್ತು ಅವರ ಧ್ವನಿಯನ್ನು ಅಡಗಿಸಿದರು. ಅಲ್ಲಿಗೆ ಆ ಚಾಲಕನಿಗೆ ನ್ಯಾಯ ಸಿಕ್ಕಿದಂತಾಯಿತೆ ?
ವಿಪಕ್ಷದ ನಾಯಕನಿಲ್ಲದೆ ಸಪ್ಪೆಯಾದ ಬಿಜೆಪಿಗೆ ಹೊಸ ಶಕ್ತಿ ನೀಡಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಅವರು ದಿನಕ್ಕೊಂದು ಅಸ್ತ್ರವನ್ನು ಪ್ರಯೋಗ ಮಾಡಲು ತೊಡಗಿದಾಗ. ನನ್ನ ಹತ್ತಿರ ಸರಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ, ಆಧಾರ ಇವೆ ಎಂದು ಪೆನ್ ಡ್ರೈವ್ ತೋರಿಸಿದ ಕುಮಾರಸ್ವಾಮಿ ಕರ್ನಾಟಕ ಲೋಕಾಯುಕ್ತದಂತಹ ಪ್ರಬಲ ವೇದಿಕೆಯನ್ನು ಉಪಯೋಗ ಮಾಡಬಹುದಿತ್ತು. ಆದರೆ ಅದು ಮಾಡಲ್ಲ.
ಸದನದಲ್ಲಿ ಸದಸ್ಯರು ಉಪಯೋಗ ಮಾಡಿದ ಭಾಷೆ ಖಂಡಿತ ಸುಸಂಸ್ಕೃತ ಆಗಿರಲಿಲ್ಲ. ಒಂದೆರಡು ಸಂದರ್ಭಗಳಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ತಾಳ್ಮೆ ಕಳೆದುಕೊಂಡು ಸಿಟ್ಟು ತೋರಿಸಿದ್ದಾರೆ. ಸ್ಪೀಕರ್ ಕನ್ನಡದ ಬಗ್ಗೆ ಅನವಶ್ಯಕವಾದ ಟೀಕೆಗಳು ಸದನದಲ್ಲಿ ಕೇಳಿ ಬಂದವು. ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಕೊಟ್ಟಿದ್ದ ಗ್ಯಾರಂಟಿ ಕಾರ್ಡ್ ಬಗ್ಗೆ ದೀರ್ಘ ಚರ್ಚೆಗಳು ನಡೆದವು, ಆದರೆ ಅದರಲ್ಲಿ ಜೊಳ್ಳು ಹೆಚ್ಚು, ಕಾಳು ಕಡಿಮೆ ಎಂಬ ಹಾಗೆ ಇತ್ತು. ಬಹುಮತ ಇದೆ ಎಂಬ ಕಾರಣಕ್ಕೆ ವಿಪಕ್ಷಗಳನ್ನು ತೀರಾ ಕ್ಷುಲ್ಲಕವಾಗಿ ಕಾಣುವುದು ಸಂಸದೀಯ ನಡವಳಿಕೆ ಅಲ್ಲ. ವಿಪಕ್ಷದಲ್ಲಿ ಒಬ್ಬನೇ ಒಬ್ಬ ಸದಸ್ಯ ಇದ್ದರೂ ಅವನಿಗೆ ಸೂಕ್ತ ಗೌರವ ಸಲ್ಲಲೇ ಬೇಕು. ಬರೀ ಈ ಶಬ್ದ ಮಾಲಿನ್ಯಕ್ಕೆ ಸೀಮಿತವಾಗಿರುವ ಸದನದ ಕಲಾಪಕ್ಕೆ ಕೋಟಿ ಕೋಟಿ ಜನಸಾಮಾನ್ಯರ ತೆರಿಗೆಯ ದುಡ್ಡು ಖರ್ಚಾಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಜನಪ್ರತಿನಿಧಿಗಳೆನಿಸಿಕೊಂಡವರಿಗೆ ಇರುವುದು ಅಗತ್ಯ.





































