ಪಡುಕುತ್ಯಾರು : ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಜನ್ಮವರ್ಧಂತಿಯು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಡುಕುತ್ಯಾರಿನಲ್ಲಿ ಜು. 15ರಂದು ನಡೆಯಲಿದೆ.
ಶ್ರೀಗಳ ಜನ್ಮವರ್ಧಂತಿ ಉತ್ಸವದ ಧರ್ಮ ಸಂಸತ್ತಿನಲ್ಲಿ ಮಹಾಸಂಸ್ಥಾನದ ವಿದ್ವಾನ್ ಮಂಡಳಿಗೆ, ವೈದಿಕ ಗುರು ಪರಂಪರೆಗೆ ಅನುಪಮ ಸೇವೆ ಸಲ್ಲಿಸುತ್ತಿರುವ ವೇ.ಬ್ರ.ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ ಇವರಿಗೆ ಆಸ್ಥಾನ ವಿದ್ವಾನ್ ಪದವಿಯನ್ನುಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪ್ರಧಾನ ಮಾಡಿ ಆಶೀರ್ವಚನ ನೀಡಲಿರುವರು.
ವಿದ್ಯಾರ್ಥಿ ಭವನ ಉದ್ಘಾಟನೆ
ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ನಾಗದರ್ಮೇಂದ್ರ ಸರಸ್ವತಿ ವಿದ್ಯಾರ್ಥಿ ಭವನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಆನೆಗುಂದಿ ಮಹಾ ಸಂಸ್ಥಾನದ ಶ್ರೀನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಗಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಪ್ರಸ್ತುತ ಕಟ್ಟಡಕ್ಕೆ ದೊರೆತಿದೆ.

ಆನೆಗುಂದಿ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್ ಕಾರ್ಕಳ ಮತ್ತು ವಿನಯ್ ಕುಮಾರ್ ಸೊರಕೆ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೋಟ ಅಮೃತೇಶ್ವರೀ ದೇವಸ್ಥಾನದ ಧರ್ಮದರ್ಶಿ ಹಾಗೂ ಮಣೂರು ಗೀತಾನಂದ ಫೌಂಡೇಶನ್ನಿನ ಪ್ರವರ್ತಕರಾದ ಆನಂದ ಸಿ.ಕುಂದರ್, ಸಮಾಜ ಸೇವಕ ಮಿಥುನ್ ಎಂ. ರೈ ಭಾಗವಹಿಸುವರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಶ್ರೀನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಪ್ರಧಾನ ಸಂಚಾಲಕ ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಶ್ರೀ ಸರಸ್ವತೀ ಎಜುಕೇಶನ್ ಟ್ರಸ್ಟ್ ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಶ್ರೀ ಸರಸ್ವತೀ ಗೋವು – ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕುತ್ಯಾರು ಗ್ರಾ. ಪಂ. ಅಧ್ಯಕ್ಷೆ ಲತಾ ಎಸ್. ಹಾಗೂ ಪ್ರತಿಷ್ಠಾನದ ಪ್ರಥಮ ವಿಶ್ವಸ್ಥರಾದ ವಿವಿಧ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಉಪಾಧ್ಯಕ್ಷರು ಪಾಲ್ಗೊಳ್ಳುವರು.
ಧರ್ಮ ಸಂಸತ್ತು
ಪ್ರತಿ ವರ್ಷ ವಾಡಿಕೆಯಂತೆ ನಡೆಯುವ ಧರ್ಮ ಸಂಸತ್ತು ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರುಗಳಾದ ಮಹಮಹೋಪಾಧ್ಯಾಯ ವಿದ್ವಾನ್ ಪಂಜ ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಬಾಲಚಂದ್ರ ಭಟ್ ಚಂದು ಕೂಡ್ಲು, ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಹರಿಶ್ಚಂದ್ರ ಎನ್. ಆಚಾರ್ಯ ಅಧ್ಯಕ್ಷರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಆನೆಗುಂದಿ ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ.
ವಿಶೇಷ ವೈದಿಕ ಕಾರ್ಯಕ್ರಮ
ವೈದಿಕ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ ಗಂಟೆ 6 ರಿಂದ ವಿಶೇಷ ಹೋಮ ಹವನ ವೈದಿಕ ಕಾರ್ಯಕ್ರಮಗಳು – ಗಣಪತಿ ಅಥರ್ವಶೀರ್ಷ ಹೋಮ, ನವಗ್ರಹ ಹೋಮ, ಧನ್ವಂತರಿ ಹೋಮ, ರುದ್ರ ಹೋಮ, ಮಹಾ ಮೃತ್ಯುಂಜಯ ಹೋಮ ನಡೆಯಲಿದ್ದು ಬಳಿಕ ಜಗದ್ಗುರುಗಳ ತುಲಾಭಾರ ಸೇವೆ, ಗುರುಪಾದುಕ ಪೂಜೆ ಸಂಪನ್ನಗೊಳ್ಳಲಿದೆ ಎಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





































