ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ
ಬೆಂಗಳೂರು : ಕಾಂಗ್ರೆಸ್ನ ಗ್ಯಾರಂಟಿ ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಹಾಕಲು ಸರಕಾರ ಕೊನೇ ದಿನಾಂಕ ನಿಗದಿಪಡಿಸಿದೆ. ವಿಧಾನಸಭೆ ಕಲಾಪದಲ್ಲಿ ಗೃಹಜ್ಯೋತಿ ಯೋಜನೆ ಕುರಿತಂತೆ ನಡೆದ ಚರ್ಚೆಯ ವೇಳೆ ಇಂಧನ ಸಚಿವ ಕೆ. ಜೆ. ಜಾರ್ಜ್, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ ಕಡೆಯ ದಿನಾಂಕ ನಿಗದಿಪಡಿಸಲು ನಿರ್ಧರಿಸಿದ್ದೇವೆ. ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ಹೇಳಿದ್ದಾರೆ.
ಆದರೆ ಗಡುವಿನೊಳಗೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಜನರು ಆತಂಕ ಪಡಬೇಕಿಲ್ಲ. ಯೋಜನೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಯೋಜನೆಯೊಳಕ್ಕೆ ತರಲು ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ನಂತರ ಎರಡು ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 1 ಕೋಟಿಗೂ ಅಧಿಕ ಜನರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆ ಆಗಸ್ಟ್ನಲ್ಲಿ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಜನರು ಯೋಜನೆಯ ಫಲಾನುಭವಿಯಾಗಲು ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡಿ (https://sevasindhugs.karnataka.gov.in/) ವಿವಿರಗಳನ್ನು ನೀಡಿ ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಹತ್ತಿರದ ವಿದ್ಯುತ್ ಕಚೇರಿ, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.
ಮೊದಲು ಯೋಜನೆಗೆ ನೋಂದಣಿಯಾಗಲು ಡೆಡ್ಲೈನ್ ಇಲ್ಲ ಎಂದು ಹೇಳಿತ್ತು. ಈಗ ಜುಲೈ 27ರ ಅಂತಿಮ ದಿನಾಂಕ ನಿಗದಿ ಮಾಡಿದೆ. ಗೃಹಜ್ಯೋತಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಗ್ರಾಮೀಣ ಪ್ರದೇಶದ ಜನರು ಯೋಜನೆ ಫಲಾನುಭವಿಗಳು ಗ್ರಾಮ ಪಂಚಾಯತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಈ ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಲು ಪ್ರತಿ ಅರ್ಜಿಗೆ 20 ರೂ. ಗಳ ಶುಲ್ಕವನ್ನು ನಿಗದಿ ಮಾಡಲಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಯಾದವರು ಆಗಸ್ಟ್ನಲ್ಲಿ ಶೂನ್ಯ ಬಳಕೆಯ ವಿದ್ಯುತ್ ಬಿಲ್ ಪಡೆಯಲಿದ್ದಾರೆ.





































