ವೈವಾಹಿಕ ಪ್ರಕರಣಗಳಲ್ಲಿ ಮಹಿಳೆಯರನ್ನು ರಕ್ಷಿಸಲು ಮತ್ತು ಅವರಿಗೆ ಸೂಕ್ತ ನ್ಯಾಯವನ್ನು ಒದಗಿಸಲು ವಿವಿಧ ರೀತಿಯ ಪರಿಣಾಮಕಾರಿಯಾದ ಕಾನೂನುಗಳು ನಮ್ಮ ದೇಶದಲ್ಲಿ ಇವೆ. ಕೆಲವು ತಪ್ಪಿತಸ್ಥ ಪತ್ನಿಯರು ಕಾನೂನಿನಲ್ಲಿ ತಮಗೆ ನೀಡಿರುವ ರಕ್ಷಣೆಯನ್ನು ದುರುಪಯೋಗ ಪಡಿಸಿಕೊಂಡು ನಿರಪರಾಧಿಯಾಗಿರುವ ತಮ್ಮ ಗಂಡಂದಿರನ್ನು ಸಂಕಷ್ಟಕ್ಕೆ ಈಡು ಮಾಡುವ ಅನೇಕ ಸಂದರ್ಭಗಳನ್ನು ನಾವು ಸಮಾಜದಲ್ಲಿ ನೋಡುತ್ತಿರುತ್ತೇವೆ. ಇದಕ್ಕೆಲ್ಲಾ ಪ್ರಮುಖ ಕಾರಣವೇನೆಂದರೆ ನಮ್ಮ ದೇಶದಲ್ಲಿ ವೈವಾಹಿಕ ಪ್ರಕರಣಗಳಲ್ಲಿ ವಿವಾಹಿತ ಪತಿಯು ಆತನ ಪತ್ನಿಯಿಂದ ಉಂಟಾಗಬಹುದಾದ ಯಾವುದೇ ಮಾನಸಿಕ ಕಿರುಕುಳ ಮತ್ತು ಕ್ರೌರ್ಯದ ವಿರುದ್ಧ ಸೂಕ್ತ ರಕ್ಷಣೆ ಬಗ್ಗೆ ಯಾವುದೇ ನಿರ್ದಿಷ್ಟವಾದ ಮತ್ತು ಪರಿಣಾಮಕಾರಿಯಾದ ಕಾನೂನು ಈ ತನಕ ಜಾರಿಯಲ್ಲಿ ಇಲ್ಲದಿರುವುದು. ಅದರೆ ಇಂತಹ ಪರಿಸ್ಥಿತಿಯಲ್ಲಿಯೂ ವಿವಾಹಿತ ಪತಿಯು ತನ್ನ ವೈವಾಹಿಕ ಜೀವನದಲ್ಲಿ ಆತನ ಪತ್ನಿಯಿಂದ ಅಥವಾ ಅವಳ ಕಡೆಯ ವ್ಯಕ್ತಿಗಳಿಂದ ಉಂಟಾಗಬಹುದಾದ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯವನ್ನು ಮತ್ತು ಸೂಕ್ತ ಪರಿಹಾರಗಳನ್ನು ಪಡೆಯಬಹುದಾಗಿದೆ. ಅದರೆ ಈ ಸಂದರ್ಭದಲ್ಲಿ ಅನ್ಯಾಯಕೊಳ್ಳಗಾದ ವಿವಾಹಿತ ಪತಿಯು ತನ್ನ ಪತ್ನಿಯಿಂದ ತಾನು ಮಾನಸಿಕ ಅಥವಾ ದೈಹಿಕ ಕಿರುಕುಳ ಅಥವಾ ಕ್ರೌರ್ಯಕ್ಕೆ ಒಳಗಾಗಿರುವುದನ್ನು ರುಜುವಾತು ಪಡಿಸುವ ಕಾನೂನುಬದ್ಧ ಜವಾಬ್ದಾರಿಯನ್ನು ಹೊಂದಿರುವುದರಿಂದ ಆತನು ಈ ಬಗ್ಗೆ ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ಇಡುವ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಸಾಮಾನ್ಯವಾಗಿ ಒಬ್ಬ ವಿವಾಹಿತ ಪುರುಷನು ತನ್ನ ವಿವಾಹಿತ ಪತ್ನಿಯಿಂದ ಮಾನಸಿಕ ಕಿರುಕುಳ ಅಥವಾ ಕ್ರೌರ್ಯಕ್ಕೆ ಈ ಸಂದರ್ಭಗಳಲ್ಲಿ ಒಳಗಾಗಬಹುದು.
ಅವುಗಳು ಯಾವುದೆಂದರೆ :
ಪತ್ನಿಯಿಂದ ದೈಹಿಕವಾಗಿ ಹಲ್ಲೆಗೆ ಒಳಗಾಗುವುದು, ನಿರಂತರ ಕೋಪ ಮತ್ತು ಕಿರುಚಾಟಕ್ಕೆ ಒಳಗಾಗುವುದು, ನಿರಂತರವಾಗಿ ಕೀಳರಿಮೆ ಮತ್ತು ಟೀಕೆಗೆ ಒಳಗಾಗುವುದು, ಅನಾವಶ್ಯಕವಾಗಿ ತನ್ನ ಪತ್ನಿಯಿಂದ ಸುಳ್ಳು ಆರೋಪಗಳಿಗೆ ಗುರಿಯಾಗಿ ಸಹಿಸಲಾರದ ಟೀಕೆಗೆ ಒಳಗಾಗುವುದು. ಯಾವುದೇ ಸಮಂಜಸವಾದ ಕಾರಣವಿಲ್ಲದೇ ವಿವಾಹಿತ ಪತ್ನಿಯು ತನ್ನ ಗಂಡನನ್ನು ತ್ಯಜಿಸಿ ಪ್ರತ್ಯೇಕವಾಗಿ ವಾಸವಾಗಿರುವುದು. ಪತ್ನಿಯು ನೇರವಾಗಿ ಅಥವಾ ಅವಳ ಜನರಿಂದ ಆಕೆಯ ಪತಿಗೆ ತೀವ್ರ ತರದ ಬೆದರಿಕೆಯನ್ನು ಒಡ್ಡುತ್ತಿರುವುದು.
ಈ ಮೇಲ್ಕಾಣೆಸಿದ ಸಂದರ್ಭಗಳಲ್ಲಿ ಮುಗ್ದ ವಿವಾಹಿತ ಪತಿಯು ಆತನ ಪತ್ನಿ ಯಾವುದೇ ಪೋಲಿಸ್ ಮತ್ತಿತರ ಇಲಾಖೆಗಳಿಗೆ ಅಥವಾ ನ್ಯಾಯಾಲಯಕ್ಕೆ ದೂರನ್ನು ನೀಡುವ ಮುಂಚಿತವಾಗಿ ಪತ್ನಿಯಿಂದ ತಾನು ಎದುರಿಸುತ್ತಿರುವ ಕಿರುಕುಳ ಅಥವಾ ಕ್ರೌರ್ಯಗಳ ಬಗ್ಗೆ ವಿವರವಾದ ದೂರನ್ನು ನೀಡುವುದು ಸೂಕ್ತ ಮತ್ತು ಅನಂತರ ಅವಶ್ಯಕವೆನಿಸಿದಲ್ಲಿ ಸಂಬಂಧಪಟ್ಟ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾದ ವಿಚ್ಚೇದನಕ್ಕೆ ತಾನು ಪತ್ನಿಯ ವಿರುದ್ಧ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪತ್ನಿಯ ಕಿರುಕುಳ, ಬೆದರಿಕೆ ಕ್ರೌರ್ಯ ಇತ್ಯಾದಿಗಳನ್ನು ಮುಂದಕ್ಕೆ ರುಜುವಾತು ಪಡಿಸುವ ಸಲುವಾಗಿ ಪತಿಯು ತನ್ನ ಪತ್ನಿಯೊಂದಿಗಿನ ಸಂಭಾಷಣೆಗಳನ್ನು ಮತ್ತು ಸ್ಕ್ರೀನ್ಶಾಟ್ಗಳನ್ನು ರೆಕಾರ್ಡ್ ಮಾಡಿಟ್ಟು ಕೊಳ್ಳಬಹುದಾಗಿದೆ. ತನ್ನ ಪತ್ನಿಯು ತನ್ನ ಅಥವಾ ತನ್ನ ಕುಟುಂಬದ ವಿರುದ್ಧ ಅಪರಾಧಕ್ಕೆ ಸಂಚು ರೂಪಿಸುತ್ತಿರುವ ಸಂದರ್ಭದಲ್ಲಿ ಅಥವಾ ಆತಳ ಪ್ರಚೋದನೆಯ ಮೇರೆಗೆ ಪೋಲಿಸ್ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ತನ್ನ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದಲ್ಲಿ ಅಥವಾ ತನ್ನ ವಿರುದ್ಧ ಹಲ್ಲೆ ಇತ್ಯಾದಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಿದಲ್ಲಿ ಅಥವಾ ಜೀವ ಬೆದರಿಕೆ ಇತ್ಯಾದಿ ಕ್ರಿಮಿನಲ್ ಬೆದರಿಕೆ ಒಡ್ಡಿದಲ್ಲಿ ನೊಂದ ವಿವಾಹಿತ ಪತಿಯು ಆತಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಪ್ರಕಾರ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದಾಗಿದೆ. ಮಾತ್ರವಲ್ಲದೆ ಹಿಂದೂ ವಿವಾಹ ಕಾಯ್ದೆ ಪ್ರಕಾರ ಅಥವಾ ವಿಶೇಷ ವಿವಾಹ ಕಾಯ್ದೆ ಪ್ರಕಾರ ವಿಚ್ಚೇದನ ಮತ್ತಿತರ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೆ. ವಿಜೇಂದ್ರ ಕುಮಾರ್, ವಕೀಲರು, ಕಾರ್ಕಳ
ಮೊ: 98452 32490/ 96116 82681







































