ಅತ್ಯಾಚಾರ : ತಂದೆ, ಮಗನಿಗೆ 20 ವರ್ಷ ಜೈಲು

ತಾಯಿಯ ಸ್ನೇಹಿತ ಮತ್ತು ಅವನ ಮಗನಿಂದ ಬಾಲಕಿ ಮೇಲೆ ದೌರ್ಜನ್ಯ

ಉಡುಪಿ: ಬಾಲಕಿಯ ಅತ್ಯಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಪೋಕ್ಸೊ ನ್ಯಾಯಾಲಯ ತಂದೆ ಮತ್ತು ಮಗನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಾವಣಗೆರೆ ಮೂಲದ ಶಿವಶಂಕರ್‌ (58) ಹಾಗೂ ಆತನ ಮಗ ಸಚಿನ್‌ (28) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಎರಡು ವರ್ಷದ ಹಿಂದೆ 14 ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಅವರ ಮೇಲಿತ್ತು.
ಬಾಲಕಿ ತನ್ನ ತಾಯಿಯ ಜತೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಅದೇ ಮನೆಯಲ್ಲಿ ತಾಯಿಯ ಸ್ನೇಹಿತ ಶಿವಶಂಕರ್‌ ಕೂಡ ವಾಸವಾಗಿದ್ದ. ಲಾಕ್‌ಡೌನ್‌ ಸಮಯದಲ್ಲಿ 2020ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಬೆಳಗಿನ ಜಾವ 5 ಗಂಟೆಗೆ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ ಶಿವಶಂಕರ್‌ ಬಾಲಕಿಯನ್ನು ಹಲವು ಬಾರಿ ದೈಹಿಕ ಸಂಪರ್ಕ ಮಾಡಿರುವುದಾಗಿ ದೂರಲಾಗಿದೆ. ಶಿವಶಂಕರ್‌ ಮಗ ಮಣಿಪಾಲದ ಹೋಟೆಲೊಂದರಲ್ಲಿ ನೌಕರಿ ಮಾಡಿಕೊಂಡಿದ್ದ ಸಚಿನ್‌ ಕೂಡ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವಾಗ ಮೇ ತಿಂಗಳಲ್ಲಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಬಾಲಕಿ ನೆರೆಮನೆಯವರಲ್ಲಿ ಹೇಳಿ ಕೊಂಡಿದ್ದಳು. ನೆರೆಮನೆ ಮಹಿಳೆ ಮಕ್ಕಳ ಸಹಾಯ ವಾಣಿಗೆ ದೂರು ನೀಡಿದ್ದರು.
ಆಗಿನ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಬಾಲಕಿಯನ್ನು ರಕ್ಷಿಸಿ ಆರೋಪಿಗಳ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಆಗಿನ ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ನಿರೀಕ್ಷಕ ಜಯಂತ್‌ ಎಂ. ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
15 ಸಾಕ್ಷಿಗಳ ವಿಚಾರಣೆ ನಡೆಸಿದಾಗ ಅಪರಾಧ ಸಾಬೀತಾಗಿದೆ. ಬಾಲಕಿಯ ತಾಯಿ ಅಭಿಯೋಜನೆ ವಿರುದ್ಧ ಸಾಕ್ಷಿ ನುಡಿದಿದ್ದರೂ ಬಾಲಕಿಯ ಸಾಕ್ಷಿ ಮತ್ತು ಇತರ ಸಾಂದರ್ಭಿಕ ಸಾಕ್ಷ್ಯವನ್ನು ಪರಿಗಣಿಸಿ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಪ್ರಕರಣದಡಿ ಇಬ್ಬರು ಆರೋಪಿಗಳಿಗೆ ತಲಾ 10 ವರ್ಷ ಜೈಲುಶಿಕ್ಷೆ, 10 ಸಾವಿರ ರೂ. ದಂಡ, ಪೋಕ್ಸೊ ಕಲಂನಡಿ ತಲಾ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷಗಳ ಹೆಚ್ಚುವರಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಂಡದ 40 ಸಾವಿರ ರೂ.ನಲ್ಲಿ 30 ಸಾವಿರ ರೂ. ಸಂತ್ರಸ್ತ ಬಾಲಕಿಗೆ ಪರಿಹಾರ ಮತ್ತು 10 ಸಾವಿರ ರೂ. ಸರಕಾರಕ್ಕೆ ಪಾವತಿಸುವಂತೆ ಹಾಗೂ ಹೆಚ್ಚುವರಿ ಪರಿಹಾರವಾಗಿ ಬಾಲಕಿಗೆ 3 ಲಕ್ಷ ರೂ. ಸರಕಾರದಿಂದ ನೀಡುವಂತೆ ಆದೇಶಿಸಲಾಗಿದೆ. ಆ ಮೊತ್ತವನ್ನು ಬಾಲಕಿಯ ಹೆಸರಿನಲ್ಲಿ ಠೇವಣಿ ಇಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್‌ ಪರ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು

















































error: Content is protected !!
Scroll to Top