ನಸುಕಿನ ಹೊತ್ತು ನಡೆದ ಕಾರ್ಯಾಚರಣೆ, ಆರೋಪಿಗಳು ಪರಾರಿ
ಕುಂದಾಪುರ : ವಾಹನದಲ್ಲಿ ಮೂರು ಗೋವುಗಳನ್ನು ತುರುಕಿಸಿಕೊಂಡು ಸಾಗಿಸುತ್ತಿರುವುದನ್ನು ಗುರುವಾರ ನಸುಕಿನ ಹೊತ್ತು ಪತ್ತೆ ಹಚ್ಚಿ ಪಾರು ಮಾಡಿದ್ದಾರೆ. ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನನುಸರಿಸಿ ಮೇರೆಗೆ ಕೋಟ ಪೊಲೀಸರು ಮೂರು ಹಸುಗಳನ್ನು ರಕ್ಷಿಸಿದ್ದಾರೆ.
ಹಸುಗಳನ್ನು ಏಸ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮಧುವನ ಮಾರ್ಗವಾಗಿ ಸಾಗಿಸುತ್ತಿರುವ ಐವರ ತಂಡದ ಬಗ್ಗೆ ಸುಳೀವು ಸಿಕ್ಕಿ ಸ್ಥಳೀಯ ಯುವಕರ ತಂಡ ತತ್‌ಕ್ಷಣವೇ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದೇ ಸಂದರ್ಭದಲ್ಲಿ ಗ್ರಾಮ ಗಸ್ತಿನಲ್ಲಿದ್ದ ಎಎಸ್‌ಐ ಗಣೇಶ್ ಪೈ ಹಾಗೂ ಪೊಲೀಸ್ ಸಿಬಂದಿ ಪ್ರಸನ್ನ ಮಾಲಾಡಿ ಅವರು ಪೊಲೀಸ್ ಜೀಪ್‌ನಲ್ಲಿ ಏಸ್ ವಾಹನವನ್ನು ಹಿಂಬಾಲಿಸಿದಾಗ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕೋಟ ಪೊಲೀಸರು ಮೂರು ಹಸುಗಳನ್ನು ರಕ್ಷಿಸಿ, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
























