ಮುಂಗಾರು ಆಗಮನ – ಎಚ್ಚೆತ್ತುಕೊಳ್ಳದ ಪುರಸಭೆ

ಅವ್ಯವಸ್ಥಿತ ಚರಂಡಿ – ಸಾರ್ವಜನಿಕರ ಸಂಚಾರಕ್ಕೆ ಅಡಚಣೆ

ಕಾರ್ಕಳ : ಮುಂಗಾರು ಆಗಮನದ ಆರಂಭದಲ್ಲೇ ಮಳೆ ಗಾಳಿಗೆ ಪುರಸಭಾ ವ್ಯಾಪ್ತಿಯ ಜನತೆ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದ ಆರಂಭದ ಹಿನ್ನೆಲೆ ಪುರಸಭಾ ಆಡಳಿತ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದರಿಂದ ಮಳೆಯಿಂದಾಗಿ ಸಂಚಾರ ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಬಿದ್ದು ಸಂಚಾರಕ್ಕೆ ತೊಂದರೆ
ಜೂ. 10 ರಂದು ಸುರಿದ ಮಳೆ ಗಾಳಿಗೆ ಪುರಸಭೆಯ ಎರಡನೇ ವಾರ್ಡ್‌ನ ನೆಕ್ಲಾಜೆ ಕಾಳಿಕಾಂಬ ರಸ್ತೆಯಲ್ಲಿ ದೊಡ್ಡ ಮರವೊಂದು ಮರವೊಂದು ಬಿದ್ದ ಪರಿಣಾಮ ಎರಡು ಲೈಟ್ ಕಂಬಗಳು ಧರಶಾಹಿಯಾಗಿದ್ದು, ಸಾರ್ವಜನಿಕರ ಓಡಾಡಟಕ್ಕೆ ಅಡಚಣೆಯಾಗಿದೆ.

ರಸ್ತೆಯಲ್ಲಿ ನಿಂತ ನೀರು
ಕಾರ್ಕಳ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯಲ್ಲಿ ಪ್ರತಿಬಾರಿಯಂತೆ ಈ ಸಲವು ಮಳೆಯ ನೀರು ನಿಂತು ಸಾವರ್ಜನಿಕರಿಗೆ ತೊಂದರೆಯಾಗಿದೆ. ಕಳೆದೆರಡು ವರುಷದಿಂದ ಇದೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಪುರಸಭೆಯ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ದುರಂತ ಎನ್ನುತ್ತಿದ್ದಾರೆ ಸಾರ್ವಜನಿಕರು.

ಸಂಪೂರ್ಣಗೊಳ್ಳದ ಚರಂಡಿ ಸ್ವಚ್ಛತೆ
ಪುರಸಭೆ ವ್ಯಾಪ್ತಿಯಲ್ಲಿ ಚರಂಡಿಯ ಹೂಳೆತ್ತುವ ಕೆಲಸ ಅಥವ ಚರಂಡಿ ಸ್ವಚ್ಛತಾ ಕಾರ್ಯ ಸಂಪೂರ್ಣಗೊಳ್ಳದೆ ಇರುವುದರಿಂದ ಮೊದಲ ಮಳೆಯಲ್ಲೇ ಸಮಸ್ಯೆ ಎದುರಿಸುವಂತಾಗಿದೆ. ದಾನಶಾಲೆಯ ಮುಖ್ಯ ರಸ್ತೆಯಲ್ಲಿರುವ ಚರಂಡಿಯಲ್ಲಿ ಕಸ ತುಂಬಿದ್ದು ಅದರ ವಿಲೇವಾರಿ ಕಾರ್ಯ ನಡೆದಿಲ್ಲ, ಮಳೆಯ ಸಂದರ್ಭ ಈ ಚರಂಡಿ ನೀರು ಕಸದ ರಾಶಿಯೊಂದಿಗೆ ಆನೆಕೆರೆಯನ್ನು ಸೇರುತ್ತದೆ. ಇದರಿಂದಾಗಿ ಆನೆಕೆರೆಯ ನೀರು ಪ್ಲಾಸ್ಟಿಕ್‌ ಮತ್ತಿತ್ತರ ತ್ಯಾಜ್ಯದೊಂದಿಗೆ ಕಲುಷಿತಗೊಳ್ಳುತ್ತದೆ. ಅನಂತಶಯನ ಪುರಸಭಾ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಪರಿಣಾಮ ನೀರು ಫುಟ್‌ಪಾತ್‌ ಮತ್ತು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎನ್ನಲಾಗುತ್ತಿದೆ.

ಪುರಸಭೆಯವರು ಮಳೆಯಿಂದ ಎದುರಾಗುವ ಸಮಸ್ಯೆ ಪರಿಹಾರಕ್ಕೆ ಮುಂಗಾರು ಬರುವ ಮೊದಲೇ ಎಚ್ಚೆತ್ತುಕೊಳ್ಳುವ ಬದಲು ಸಮಸ್ಯೆ ಬಂದಾಗ ಎಚ್ಚತ್ತುಕೊಳ್ಳುವುದು ವಿಷಾದನೀಯ. ಚರಂಡಿ ಹೂಳೆತ್ತುವ ಕೆಲಸ ಆಗಸ್ಟ್‌ ತಿಂಗಳಾದರೂ ಪೂರ್ಣಗೊಳ್ಳುವುದಿಲ್ಲ ಇದರಿಂದ ಮಳೆಯ ಸಂದರ್ಭ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನಾದರೂ ಪುರಸಭೆ ತಕ್ಷಣವೇ ಎಚ್ಚೆತ್ತುಕೊಳ್ಳಲಿ ಎಂದು ಸ್ಥಳೀಯೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಸರಿಯಾದ ಸ್ಪಂದನೆಯಿಲ್ಲ
ಮೂರು ಮಾರ್ಗದಿಂದ ಪೆಟ್ರೋಲ್ ಪಂಪ್‌ವರಗೆ ಚರಂಡಿ ವ್ಯವಸ್ಥೆ ಅವ್ಯವಸ್ಥಿತವಾಗಿದೆ. ಗಾಂಧಿ ಮೈದಾನ ಸಾಗುವ ರಸ್ತೆಯೊಂದರಲ್ಲಿ ಚರಂಡಿಯೇ ಇಲ್ಲ. ಇನ್ನು ನಗರದಲ್ಲಿ ಇತ್ತೀಚೆಗೆ ಹೊಸದಾಗಿ ಮಾಡಿದ ಚರಂಡಿ ಕಾಮಗಾರಿ ಕಳಪೆ ಮಟ್ಟದಾಗಿದೆ. ಮಳೆಗಾಲದ ಆರಂಭದಲ್ಲಿ ಪುರಸಭೆ ಹೊಳೆತ್ತುವ ಕೆಲಸವನ್ನು ಗುತ್ತಿಗೆದಾರರಿಗೆ ವಹಿಸಿಕೊಡುತ್ತಿದ್ದು, ಆ ಕೆಲಸ ಸರಿಯಾಗಿ ನಡೆದಿದೆಯೇ ಇಲ್ಲವೇ ಎಂದು ಪರಿಶೀಲನೆ ಕೂಡ ನಡೆಸುವುದಿಲ್ಲ. ಪುರಸಭೆ ಬರೀ ನಾಮಪತ್ರಕ್ಕೆ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಹೊರತು ಸಮಸ್ಯೆಗೆ ಬೇಕಾದ ಪರಿಹಾರ ಕಾರ್ಯವನ್ನು ಮಾಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಚರಂಡಿ ಸಮಸ್ಯೆಯ ಬಗ್ಗೆ ಖುದ್ದಾಗಿ ಪುರಸಭೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ.
ದಯಾನಂದ ಪೈ
ಸ್ಥಳೀಯರು

































































error: Content is protected !!
Scroll to Top