ಕಟೀಲು ಕ್ಷೇತ್ರದಲ್ಲಿ ತೀವ್ರ ನೀರಿನ ಅಭಾವ
ಶಾಲೆ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಸಮಸ್ಯೆ
ಕಾರ್ಕಳ : ನಂದಿನಿ ನದಿ ಪೂರ್ತಿಯಾಗಿ ಬತ್ತಿ ಹೋಗಿರುವ ಕಾರಣ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಅಲ್ಲೀಗ ನಿತ್ಯ ನಡೆಯುವ ಅನ್ನದಾನಕ್ಕೂ ನೀರು ಹೊಂದಿಸಲು ಕಷ್ಟಪಡುವ ಸ್ಥಿತಿ ಇದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಂದಿನಿ ನದಿ ಬತ್ತಿಹೋಗಿದೆ. ಕಟೀಲು ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರಿಗಾಗಿ ತೀರ್ಥ, ಅನ್ನಪ್ರಸಾದದ ಜತೆಗೆ ಕಟೀಲು ದೇವಳದ ಶಿಕ್ಷಣ ಸಂಸ್ಥೆಗಳ ಅನ್ನಪ್ರಸಾದಕ್ಕೂ ನೀರು ಬಳಕೆಯಾಗುತ್ತದೆ. ಆದರೆ ಅದ್ಯಾವುದಕ್ಕೂ ಈಗಿರುವ ಸಣ್ಣ ಪ್ರಮಾಣದ ನೀರು ಸಾಕಾಗುತ್ತಿಲ್ಲ. ಹೀಗಾಗಿ ದೈನಂದಿನ ಚಟುವಟಿಕೆಗಳಿಗೆ ನದಿ ನೀರು ಬತ್ತಿ ಹೋಗಿರುವುದು ಅಡ್ಡಿಯಾಗಿದೆ. ಮೂರು ಹೊತ್ತು ದೇವಸ್ಥಾನದಲ್ಲಿ ಅನ್ನಪ್ರಸಾದ ವಿತರಣೆಯಾಗುವ ಕಾರಣ, ಸ್ಟೀಲ್ ಬಟ್ಟಲುಗಳಲ್ಲಿ ಊಟ ವಿತರಿಸಲಾಗುತ್ತಿತ್ತು. ಇದೀಗ ಅದರ ಬದಲಿಗೆ ಅಡಕೆ ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ.
ಜೂನ್ ತಿಂಗಳಲ್ಲಿ ಕರಾವಳಿ ಪ್ರವೇಶಿಸುವ ಮುಂಗಾರು ಇನ್ನೂ ಬಂದಿಲ್ಲ. ಅಲ್ಲಲ್ಲಿ ಸ್ವಲ್ಪ ಮಳೆಯಾಗಿದ್ದರೂ ನದಿ , ಹಳ್ಳಕೊಳ್ಳಗಳು ತುಂಬಿ ಒರತೆ ಹುಟ್ಟವಷ್ಟು ಮಳೆ ಎಲ್ಲೂ ಆಗಿಲ್ಲ. ಬಿರು ಬೇಸಿಗೆ ಮುಂದುವರಿದಿದ್ದು, ಇನ್ನೂ ಕೆಲವು ದಿನ ಮಳೆಗಾಲ ವಿಳಂಬವಾಗುವ ಸಾಧ್ಯತೆ ಗೋಚರಿಸುತ್ತಿದೆ. ಈಗಾಗಲೇ ಒಂದು ವಾರ ವಿಳಂಬವಾಗಿದೆ.
ಸಾಮಾನ್ಯವಾಗಿ ಈ ಹೊತ್ತಿಗೆಗಾಗಲೇ ಉಳುಮೆ ಮುಗಿದು ಬಿತ್ತನೆ ಕಾರ್ಯ ಪ್ರಾರಂಭವಾಗಬೇಕಿತ್ತು. ಮಳೆ ಇಲ್ಲದ ಕಾರಣ ಇನ್ನೂ ಜನ ಗದ್ದೆಗೆ ಇಳಿದಿಲ್ಲ. ಎಲ್ಲೆಡೆ ಈಗ ಸುಡುವ ಬೇಸಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಯದ್ದೇ ಮಾತು. ಹೆಬ್ರಿ ಮುಂತಾದೆಡೆ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಉಡುಪಿ ನಗರದಲ್ಲಿ ಐದು ದಿನಕ್ಕೊಮ್ಮೆ ನೀರು ಪೂರೈಸಲು ನಗರ ಸಭೆ ನಿರ್ಧರಿಸಿದೆ. ಕಾರ್ಕಳ ನಗರದಲ್ಲೂ ಪರಿಸ್ಥಿತಿ ಹದಗೆಟ್ಟಿದೆ. ಮಳೆ ಇನ್ನೂ ವಿಳಂಬವಾದರೆ ಜನ ನೀರಿಗಾಗಿ ಹಾಹಾಕಾರ ಎಬ್ಬಿಸುವ ಸಾಧ್ಯತೆಯಿದೆ.
ಕರಾವಳಿಯಲ್ಲಿ ಬಹುತೇಕ ಸಣ್ಣಪುಟ್ಟ ನದಿ, ಹೊಳೆಯನ್ನು ನಂಬಿ ಇರುವ ದೇವಸ್ಥಾನಗಳಲ್ಲಿ ನೀರಿನ ಕೊರತೆ ಇದೆ. ಆದರೆ ಅಲ್ಲಿ ಭಕ್ತರ ಸಂಖ್ಯೆ ವಿರಳವಾಗಿರುವ ಕಾರಣ ದೊಡ್ಡ ಮಟ್ಟಿನ ಸಮಸ್ಯೆ ತಲೆದೋರಿಲ್ಲ. ಕಟೀಲಿನಲ್ಲಿ ಪದವಿ ಕಾಲೇಜು ಹೊರತುಪಡಿಸಿ ಒಂದನೇ ತರಗತಿಯಿಂದ ಪದವಿಪೂರ್ವ ಕಾಲೇಜಿನವರೆಗೆ ಮದ್ಯಾಹ್ನದವರೆಗೆ ತರಗತಿಗಳು ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಮೂರು ಬಾವಿ ಮತ್ತು ಮೂರು ಬೋರ್‌ವೆಲ್‌ಗಳು ಇದ್ದರೂ ನೀರು ಸಂಪೂರ್ಣವಾಗಿ ಬತ್ತಿದೆ.
ಶಾಲೆ, ಕಾಲೇಜುಗಳಿಗೆ ಸಮಸ್ಯೆ
ನೀರಿನ ಕೊರತೆ ಶಾಲೆ ಕಾಲೇಜುಗಳಿಗೆ ಸಮಸ್ಯೆ ತಂದೊಡ್ಡಿದೆ. ಶಾಲೆಗಳಲ್ಲಿ ಬಿಸಿಯೂಟಕ್ಕೆ ತೊಂದರೆಯಾಗುತ್ತಿದೆ. ಪಂಚಾಯಿತಿಗಳು ನೀರು ಪೂರೈಸುತ್ತಿದ್ದರೂ ಸಾಕಾಗುತ್ತಿಲ್ಲ. ಹಾಸ್ಟೆಲ್‌ಗಳಲ್ಲಿ ಕೂಡ ಇದೇ ಸಮಸ್ಯೆಯಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಮಳೆಗಾಲ ಶುರುವಾದ ಬಳಿಕ ಬಂದರೆ ಸಾಕು ಎಂದು ಹೇಳಿವೆ. ಕೆಲವು ಶಾಲೆಗಳು ಮಳೆ ಶುರುವಾಗುವ ತನಕ ರಜೆ ಕೊಡಬೇಕೆಂದು ಮನವಿ ಮಾಡಿವೆ. ಶಾಲೆ ಕಾಲೇಜುಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಅಷ್ಟು ದೊಡ್ಡ ಜಲಮೂಲ ಎಲ್ಲೂ ಇಲ್ಲ. ಎಲ್ಲದಕ್ಕೂ ಮಳೆಯೊಂದೇ ಪರಿಹಾರವಾಗಿದ್ದು ಜನ ಮಳೆ ಶುರುವಾಗುವದನ್ನೇ ಕಾಯುತ್ತಿದ್ದಾರೆ.
ಕರಾವಳಿಯಲ್ಲಿ ಮಳೆಗಾಗಿ ದೇವರ ಮೊರೆಹೋಗುತ್ತಿದ್ದಾರೆ. ಮಳೆಗಾಗಿ ಪ್ರಾರ್ಥನೆ, ಅಭಿಷೇಕ, ಹೋಮ ಹವನಗಳು ನಡೆಯುತ್ತಿವೆ.