ಹೀಗೆ ನಡೆಯುತ್ತಿತ್ತು ಕಾರ್ಕಳ ಮಾರಿಪೂಜೆ ಬಲಿ ತರ್ಪಣ…

ಹಿಂದೆ ಕೋಣ ಬಲಿ, ಇಂದು ಕುರುದಿ ತರ್ಪಣ

ಕಾರ್ಕಳ ಸೀಮೆಯ ಎಂಟು ಮಾಗಣೆಯ ಒಡತಿ ಪುರದೇವಿ ಮಾರಿಯಮ್ಮನಿಗೆ ವಾರ್ಷಿಕ ಮಾರಿಪೂಜೆಯ ಸಂಭ್ರಮ. 19 ಸಮುದಾಯಗಳು ಏಕಕಾಲದಲ್ಲಿ ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡುವ ಪುಣ್ಯ ಕ್ಷೇತ್ರ. ಅಂದು ಹಾಗೂ ಇಂದು ನಡೆಯುತ್ತಿರುವ ಮಾರಿ ಪೂಜೆಗೆ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಹಿಂದೆ 8 ಮಾಗಣೆಯ ಜನರು ಸೇರಿ, ಒಂದು ಮಾಗಣೆಗೆ 4ರಂತೆ ಒಟ್ಟು 32 ಕೋಣಗಳನ್ನು ಬಲಿ ಕೊಡುತ್ತಿದ್ದರು. ಪ್ರಾಣಿ ಬಲಿ ನಿಷೇಧವಾದ ಅನಂತರ ಕೋಣ ಬಲಿ ನೀಡುವ ಕ್ರಮ ನಿಂತುಹೋಗಿದೆ. ಅದಿಂದು ಸಾತ್ವಿಕ ರೂಪ ಪಡೆದಿದೆ. ಬಲಿಗೆ ಬಳಸುತ್ತಿದ್ದ 8 ಕತ್ತಿಗಳನ್ನು ಇಂದಿಗೂ ಕ್ಷೇತ್ರದಲ್ಲಿ ಕಾಣಬಹುದು. ಆ ಕೋಣ ಬಲಿಯ ಹಿಂದಿನ ಆರಾಧನೆಯ ಹಿನ್ನೋಟವನ್ನು ಸಂಕ್ಷಿಪ್ತವಾಗಿ ನೀಡುವ ಪ್ರಯತ್ನ. ಇಲ್ಲಿ ಬಲಿಯನ್ನು ವೈಭವೀಕರಣಗೊಳಿಸುವುದಕ್ಕಲ್ಲ. ಬದಲಾಗಿ ಅಂದಿದ್ದ ನಮ್ಮ ಹಿರಿಯರ ಆಚರಣೆಯನ್ನು ತಿಳಿಸುವ ಪ್ರಯತ್ನ.

ಹಿಂದೆ ಬಲಿಗೆ ಬಳಸುತ್ತಿದ್ದ ಕತ್ತಿಗಳು

ಹಿಂದೆ 5 ಮಂಗಳವಾರಗಳ ಕಾಲ ನಡೆಯುತ್ತಿದ್ದ ಮಾರಿಪೂಜೆಯು ಈಗ 4 ಮಂಗಳವಾರ ನಡೆಯುತ್ತಿದೆ. ಎರಡನೇ ಮಂಗಳವಾರ ಕೋಣ ಬಿಡುವ ಕ್ರಮ. ಅಂದು ಸಂಜೆ ಪೂಜೆ ಆದ ನಂತರ ಹರಿವಾಣದಲ್ಲಿ ಹೂ ಮತ್ತು ಪ್ರಸಾದವನ್ನು ಹವಾಲ್ದಾರನ ಕೈಗೆ ಕೊಡಲಾಗುತ್ತದೆ. ಮರುದಿನ ಬೆಳಗ್ಗೆ ಹವಾಲ್ದಾರ ಯಾವ ದಿಕ್ಕಿಗೆ ಹೋಗಬೇಕೆಂದು ಮನಸು ಬರುವುದೋ ಆ ದಿಕ್ಕಿನೆಡೆಗೆ ಸಾಗುತ್ತಾನೆ. ಆ ದಿಕ್ಕಿನಲ್ಲಿ ಸಾಗಿಬರುವಾಗ ಗದ್ದೆಯಲ್ಲಿ ಯಾವ ಕೋಣ ತನ್ನನ್ನು ಬಲಿಗಾಗಿ ಕರೆಯುತ್ತದೋ, ಆ ಕೋಣಕ್ಕೆ ಪ್ರಸಾದವನ್ನು ಹಾಕಲಾಗುತ್ತದೆ. ಆ ಕೋಣದ ಯಜಮಾನ ಯಾರೆಂದು ಹುಡುಕಿ ಆತನಲ್ಲಿ ಅರಿಕೆ ಮಾಡಿ ಕೋಣವನ್ನು ಮಾರಿಗುಡಿಗೆ ತಂದು ಕಟ್ಟಲು ವಿನಂತಿಸಲಾಗುತ್ತದೆ. ಇದೇ ಸಂದರ್ಭ ಕೋಣದ ಯಜಮಾನನಿಗೆ ಮಾರಿಗುಡಿಯ ಭಂಡಾರದಿಂದ ಅದಕ್ಕೆ ತಗುಲುವ ಮೌಲ್ಯವನ್ನು ನೀಡಲಾಗುತ್ತದೆ.

ಕುರುದಿ ತರ್ಪಣ

ಮುಂದೆ ಕೋಣವನ್ನು ಕೊರಗ ಜನಾಂಗದವರು ಸುಮಾರು 15 ದಿನಗಳ ಕಾಲ ಹುರುಳಿ-ಹುಲ್ಲು ಕೊಟ್ಟು ಸಾಕಿ ಸಲಹುತ್ತಾರೆ. ಪೌಷ್ಟಿಕವಾಗಿ ತಿಂದ ಕೋಣ ದಷ್ಟಪುಷ್ಟವಾಗಿ ಬೆಳೆಯುತ್ತದೆ. ಮಾರಿ ಪೂಜೆಗೆ ಹತ್ತಿರವಾಗುತ್ತಿದ್ದಂತೆ ಆಹಾರ ತಿನ್ನುವುದನ್ನು ತ್ಯಜಿಸುತ್ತದೆ. ಮಾರಿ ಪೂಜೆಯ ಮುನ್ನಾ ದಿನ ಸೋಮವಾರ ಕೋಣವನ್ನು ಅಲಂಕಾರ ಮಾಡಿ ಬೀದಿಯಲ್ಲಿ ಕರೆದುಕೊಂಡು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಮಾರಿಗುಡಿಗೆ ತರಲಾಗುತ್ತದೆ.
ಮಾರಿ ಪೂಜೆಯ ದಿನ ಗಟಾಯು ಪೂಜೆ ಮುಗಿದು ಬರುವ ಹೊತ್ತಿಗೆ ಕೋಣ ಬಲಿಗೆ ತಯಾರಾಗುತ್ತದೆ. ಹಿಂದೆ ಮಾರಿಗುಡಿಯ ಎದುರು ರಣಗಂಬವಿತ್ತು. ಅದರಡಿ ಕಟ್ಟೆ, ಅದರ ಪಕ್ಕ ಸಣ್ಣ ಹೊಂಡ ಇತ್ತು. ರಣ ಕಂಬವನ್ನು 5 ನೆನೆ ಬತ್ತಿಗಳಿಂದ ಉರಿಸಲಾಗುತ್ತದೆ. ಕೋಣದ ಕೊಂಬನ್ನು ರಣಕಂಬಕ್ಕೆ ಕಟ್ಟಿ, ಕಾಲುಗಳನ್ನು ಹಗ್ಗದಿಂದ ಬಿಗಿ ಹಿಡಿಯಲಾಗುತ್ತದೆ.
ಅದೇ ಹೊತ್ತಿಗೆ ಬಲಿಕತ್ತಿ ಹಿಡಿದಾತ ಮಾರಿ ಪೂಜೆಯ ಸಮಯದ ದೇವಿಯ ಗದ್ದಿಗೆಯೆದುರು ತೆರೆಕಟ್ಟಿ ಇಳಿಯುವಂತಹ ಸಮಯದಲ್ಲಿ “ಚಂಡಿ, ಚಾಮುಂಡಿ, ಕಾಳಿ, ಮಹಾಕಾಳಿ, ಕೋಟೆಯವರಪ್ಪಣೆ ಬೇಟೆಯವರಪ್ಪಣೆ, ಒಡೆಯರಪ್ಪಣೆ, ಬೇಟೆಗೆ ಇಳಿ” ಎಂದು ದೇವಿಯಲ್ಲಿ ಅಪ್ಪಣೆ ಕೇಳುತ್ತಾನೆ. ಆಗ ಗದ್ದಿಗೆಯಲ್ಲಿರುವ ದೇವಿಯ ಮೂರ್ತಿಯು ಸ್ವಲ್ಪ ಮುಂದೆ ಜರುಗಿ ದೇವಿ ತನ್ನ ಒಪ್ಪಿಗೆ ನೀಡುತ್ತಾಳೆ ಎಂಬ ನಂಬಿಕೆ ಇದೆ. ಈ ಸಂದರ್ಭ ದೇವಿಯ ಉಗ್ರರೂಪವನ್ನು ಮುಖದಲ್ಲಿ ಇಂದಿಗೂ ಕಾಣಬಹುದು.
ಬಲಿ ಕತ್ತಿ ಹಿಡಿದಾತ ದೇವಿಯಲ್ಲಿ ಅಪ್ಪಣೆಯನ್ನು ಪಡೆದು ಮುಂದೆ ಸಾಗುತ್ತಾನೆ, ಇದೇ ಸಂದರ್ಭ ದೇವಿಯನ್ನು ಬಂಡಿಯಲ್ಲಿ ಕೂರಿಸಿ ಗುಡಿಗೆ ಮೆರವಣಿಗೆಯಲ್ಲಿ ಕರೆ ತರುತ್ತಾರೆ. ಕೋಣ ಬಲಿ ಕೊಡುವ ಸಮಯದಲ್ಲಿ ಆಡಳಿತ ಮುಖ್ಯಸ್ಥರು, ಹವಾಲ್ದಾರರು ಸಹಿತ ಗುಡಿಯ ಪ್ರಮುಖರು ಒಳಗಿರುತ್ತಾರೆ. ಆಗ ಪರದೆಯನ್ನು ಎಳೆಯಲಾಗುತ್ತದೆ. ಈ ಸಂದರ್ಭ ಹೊರಗಿದ್ದವರು ಒಳಗೆ ಹಾಗೂ ಒಳಗಿದ್ದವರು ಹೊರಗೆ ಓಡಾಡುವಂತಿಲ್ಲ. ಪುನಃ ಬಲಿಕಾರ ದೇವಿಯಲ್ಲಿ ಬೇಟೆಗೆ ಅಪ್ಪಣೆ ಕೊಡಿ ಎಂದು ಕೇಳುತ್ತಾನೆ. ಅದೇ ಹೊತ್ತಿಗೆ ಇಡೀ ಮಾರಿಗುಡಿಯ ಒಳ ಮತ್ತು ಹೊರ ಪ್ರಾಂಗಣ ನೀರವ ಮೌನದಿಂದ ಕೂಡಿರುತ್ತದೆ. ಜೋರಾಗಿ ‘ಹವಾಲ್ದಾರ, ಹವಾಲ್ದಾರ, ಹವಾಲ್ದಾರ’ ಎಂದು ಕತ್ತಿ ಹಿಡಿದಾತ ಮೂರು ಬಾರಿ ಕೂಗುತ್ತಾನೆ. ಬಲಿಕತ್ತಿಯಿಂದ ಕೋಣದ ಕುತ್ತಿಗೆಯನ್ನು ಕಡಿಯುತ್ತಾನೆ. ಆ ಕತ್ತಿಯನ್ನು ಹಿಂದೆ ತೆಗೆಯದೆ ಪೂರ್ಣವಾಗಿ ಕೋಣದ ಕುತ್ತಿಗೆಯನ್ನು ಸೀಳುತ್ತಾನೆ.
ಅದೇ ಸಮಯ ಕೋಣದ ತಲೆಯನ್ನು ರಣಕಂಬದ ಬಳಿಯ ಕಟ್ಟೆಯ ಮೇಲಿಡುತ್ತಾರೆ. ಕಡಿದ ಕಾಲನ್ನು ಬಾಯಿಗಿಡುತ್ತಾರೆ. ಕೋಣದ ತಲೆಯ ಮೇಲೆ ಹಣತೆ ಇಟ್ಟು ದೀಪ ಹಚ್ಚುತ್ತಾರೆ. ಕೋಣದ ಕಣ್ಣು ತೆರೆದೆ ಇರುತ್ತದೆ. ಮರುದಿವಸ ಕಾಡಿಗೆ ಹೋಗುವ ಸಂದರ್ಭ ಕಣ್ಣು ಮುಚ್ಚಿರುತ್ತದೆ. ಪ್ರಸ್ತುತ ಬಲಿಯ ಬದಲು ಕುಂಬಳಕಾಯಿ ಕಡಿಯುವ ಮೂಲಕ ಕುರುದಿ ತರ್ಪಣ ಗೈಯ್ಯಲಾಗುತ್ತದೆ. ಹೀಗೆ ಸಾತ್ವಿಕ ರೂಪ ಪಡೆದಿದೆ.

✒️ಸಂತೋಷ್ ನೆಲ್ಲಿಕಾರು































































































error: Content is protected !!
Scroll to Top