ಡಿಕೆಶಿ ವಿಧಿಸಿರುವ ಆ ನಾಲ್ಕು ಷರತ್ತುಗಳು…

ಅಧಿಕಾರದ ಜುಟ್ಟು ತನ್ನ ಕೈಯಲ್ಲೇ ಇರುವಂತೆ ತಂತ್ರಗಾರಿಕೆ

ಬೆಂಗಳೂರು : ನಾಲ್ಕು ಷರತ್ತಿನ ಮೇಲೆ ಡಿ. ಕೆ. ಶಿವಕುಮಾರ್‌ ಕಾಂಗ್ರೆಸ್‌ ಹೈಕಮಾಂಡ್‌ನ ಮುಖ್ಯಮಂತ್ರಿ ಪಟ್ಟದ ಸಂಧಾನ ಸೂತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಎರಡು ಷರತ್ತು ಈಡೇರಿಸಬಹುದಾದರೂ ಇನ್ನೆರಡು ಷರತ್ತು ಬಹಳ ಕಠಿಣವಾಗಿವೆ. ಆದರೆ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್‌ ಇಬ್ಬರೂ ಸಿಎಂ ಗಾದಿಗಾಗಿ ಪಟ್ಟು ಹಿಡಿದು ಹಗ್ಗ ಜಗ್ಗಾಟ ಪ್ರಾರಂಭಿಸಿದ ಕಾರಣ ಕಾಂಗ್ರೆಸ್‌ ವರಿಷ್ಠರಿಗೆ ಈ ಷರತ್ತುಗಳಿಗೆ ಒಪ್ಪಿಕೊಳ್ಳದೆ ಅನ್ಯ ಮಾರ್ಗವಿರಲಿಲ್ಲ.
ಡಿ.ಕೆ. ಶಿವಕುಮಾರ್‌ ವಿಧಿಸಿರುವ ನಾಲ್ಕು ಷರತ್ತುಗಳು ಹೀಗಿವೆ: ಮೊದಲ ಅವಧಿಗೆ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಬೇಕು, ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಸಹ ಬದ್ಧವಾಗಿರಬೇಕು, ಮೊದಲ ಅವಧಿ ಮುಗಿದ ಕೂಡಲೇ ನನ್ನನ್ನು ಮುಖ್ಯಮಂತ್ರಿ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಕೇವಲ ಒಬ್ಬರು ಮಾತ್ರ ಉಪ ಮುಖ್ಯಮಂತ್ರಿ ಇರಬೇಕು. ಬೇರೆ ಯಾರನ್ನೂ ಉಪಮುಖ್ಯಮಂತ್ರಿ ಮಾಡುವಂತಿಲ್ಲ, ಉಪ ಮುಖ್ಯಮಂತ್ರಿಯ ಜತೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ನನ್ನ ಬಳಿಯಲ್ಲೇ ಇರಬೇಕು. ಇವು ಡಿ. ಕೆ. ಶಿವಕುಮಾರ್ ಹಾಕಿರುವ ಷರತ್ತುಗಳು.
30:30 ಸೂತ್ರ ಎಂದ ಮೇಲೆ ಎರಡನೇ ಅವಧಿಗೆ ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್‌ ಹೈಕಮಾಂಡ್‌ನ ರಾಜಧರ್ಮ. ಇದನ್ನು ಈಡೇರಿಸಿವುದು ಕಷ್ಟವಾಗದು ಎಂದು ಸದ್ಯದ ಪರಿಸ್ಥಿತಿಯಲ್ಲಿ ಹೇಳಬಹುದು. ಸಿದ್ದರಾಮಯ್ಯನವರು ಕೂಡ ಇದನ್ನು ಒಪ್ಪಿಕೊಂಡಿರುವುದರಿಂದ ತಕರಾರು ಇಲ್ಲದೆ ಅಧಿಕಾರ ವರ್ಗಾಯಿಸಬಹುದು.
ಆದರೆ ವರಿಷ್ಠರಿಗೆ ತಲೆನೋವಾಗಿರುವುದು ಕೊನೆಯ ಎರಡು ಷರತ್ತುಗಳು. ಕಾಂಗ್ರೆಸ್ಸಿನಲ್ಲಿ ಈಗಾಗಲೇ ಸುಮಾರು ಒಂಡು ಡಜನ್‌ ನಾಯಕರು ಉಪಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ನಿಟ್ಟನಲ್ಲಿ ಹಾಗೂ ಹಿರಿತನಕ್ಕೆ ಗೌರವ ಕೊಡಲು ಕನಿಷ್ಠ ಮೂವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಕಾಂಗ್ರೆಸ್‌ ನಾಯಕರು ಬಯಸಿದ್ದರು. ಮುಖ್ಯವಾಗಿ ಹಿರಿಯ ನಾಯಕರಾಗಿರುವ ಡಾ| ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಬಿಜೆಪಿಯಿಂದ ಪಕ್ಷಾಂತರ ಮಾಡಿರುವ ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್‌ ಇವರಿಗೆಲ್ಲ ಸೂಕ್ತ ಸ್ಥಾನಮಾನ ಕಲ್ಪಿಸುವ ಹೊಣೆಗಾರಿಕೆ ಇದೆ. ಈಗ ಒಂದೇ ಮುಖ್ಯಮಂತ್ರಿ ಎಂದರೆ ಯಾರಿಗೂ ಆ ಅವಕಾಶ ಸಿಗುವುದಿಲ್ಲ. ಇವರನ್ನು ಸಮಾಧಾನಿಸಲು ಕಾಂಗ್ರೆಸ್‌ ನಾಯಕರು ಯಾವ ತಂತ್ರ ಅನುಸರಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು.
ಮೂರ್ನಾಲ್ಕು ಉಪಮುಖ್ಯಮಂತ್ರಿಗಳು ಇದ್ದರೆ ಆ ಹುದ್ದೆಯ ಘನತೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಡಿಕೆಶಿ ತಾನೊಬ್ಬನೇ ಉಪಮುಖ್ಯಮಂತ್ರಿಯಾಗಿಬೇಕು ಎಂಬ ಷರತ್ತು ಹಾಕಿದ್ದಾರೆ. ಈ ಷರತ್ತು ಸಿದ್ದರಾಮಯ್ಯ ಅವರಿಗೂ ಇಷ್ಟವಾಗಿದೆ. ನಿಜಕ್ಕಾದರೆ ಅವರಿಗೆ ತನ್ನ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರುವುದೇ ಇಷ್ಟವಿಲ್ಲ. ಇದರಿಂದ ತನ್ನ ಅಧಿಕಾರದ ಪ್ರಭಾವಳಿ ಕಡಿಮೆಯಾಗುತ್ತದೆ ಎಂದು ಅವರಿಗೆ ಅರಿವಿದೆ. ಸ್ವತಹ ತಾನೇ ಒಂದು ಕಾಲದಲ್ಲಿ ಉಪಮುಖ್ಯಮಂತ್ರಿಯಾಗಿದ್ದರೂ ಅವರು ಈ ಹುದ್ದೆಯನ್ನು ಈಗ ಬಯಸುತ್ತಿಲ್ಲ. ಇದು ಸಾಂವಿಧಾನಿಕ ಹುದ್ದೆ ಅಲ್ಲದಿದ್ದರೂ ಮುಖ್ಯಮಂತ್ರಿ ನಂತರದ ಪ್ರಭಾವಿ ನಾಯಕ ಎಂಬ ಭಾವನೆಯಿದೆ. ಹೀಗಾಗಿ ಎಲ್ಲರೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಾತೊರೆಯುತ್ತಾರೆ.
ನಾಲ್ಕನೇ ಷರತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೂ ತನಗೇ ನೀಡಬೇಕೆನ್ನುವುದು. ಇದು ಪ್ರಾಯೋಗಿಕವಾಗಿ ಕಷ್ಟವಲ್ಲದಿದ್ದರೂ ಎರಡೆರಡು ಪ್ರಭಾವಿ ಹುದ್ದೆಗಳನ್ನು ಒಬ್ಬನಿಗೇ ನೀಡಿ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕಾದ ಉಭಯ ಸಂಕಟ ಕಾಂಗ್ರೆಸ್ಸಿನದ್ದು. ಉಪಮುಖ್ಯಮಂತ್ರಿಯಾದ ಮೇಲೆ ಪ್ರಭಾವಿ ಸಚಿವ ಖಾತೆಯನ್ನೂ ಶಿವಕುಮಾರ್‌ಗೆ ನೀಡಬೇಕು. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಇರುವುದರಿಂದ ರಾಜ್ಯದ ಅಧಿಕಾರದ ಜುಟ್ಟು ಬಹುತೇಕ ತನ್ನ ಕೈಯಲ್ಲೇ ಇರುವಂತೆ ಶಿವಕುಮಾರ್‌ಗೆ ನೋಡಿಕೊಂಡಿದ್ದಾರೆ. ಮುಂದೆ ಇದು ಯಾವೆಲ್ಲ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂಬುದನ್ನು ಕಾದುನೋಡಬೇಕು.



















































































error: Content is protected !!
Scroll to Top