ರಜೆಯಲ್ಲಿ ಊರಿಗೆ ಬಂದಿದ್ದ ಬಾಲಕಿಯರು
ಮಂಗಳೂರು: ಕಡಬ ತಾಲೂಕಿನ ಬಳ್ಪದ ಕೇನ್ಯ ಕಣ್ಕಲ್ ಸಮೀಪದ ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಎಂಬವರ ಪುತ್ರಿಯರಾದ 11 ವರ್ಷದ ಆವಂತಿಕಾ ಮತ್ತು 16 ವರ್ಷದ ಹಂಸಿಕಾ ಮೃತಪಟ್ಟಿರುವ ದುರ್ದೈವಿಗಳು.
ನದಿ ನೀರಲ್ಲಿ ಬಾಲಕಿಯರು ನಾಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಹುಡುಕಾಟ ನಡೆಸಿ ಬಾಲಕಿಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಕೇನ್ಯ ಉದಯ ಅಮ್ಮಣ್ಣಾಯ ಅವರ ಸಹೋದರ ಸತೀಶ್ ಅಮ್ಮಣ್ಣಾಯ ಬೆಂಗಳೂರಿನಲ್ಲಿ ವಾಸವಾಗಿದ್ದು, ರಜೆಯಾಗಿರುವ ಕಾರಣ ಹೆಣ್ಣು ಮಕ್ಕಳಿಬ್ಬರು ಚಿಕ್ಕಪ್ಪನ ಮನೆಗೆ ಸೋಮವಾರ ಬೆಳಗ್ಗೆ ಬಂದಿದ್ದರು. ಸಂಜೆ ಮನೆ ಮಂದಿ ಜತೆಗೆ ಮನೆಯ ಸಮೀಪವೇ ಇರುವ ನದಿ ದಡಕ್ಕೆ ಹೋಗಿದ್ದರು. ಹೆಣ್ಣು ಮಕ್ಕಳಿಬ್ಬರು ಆಟವಾಡಲು ನೀರಿಗೆ ಇಳಿದು ನಾಪತ್ತೆಯಾಗಿದ್ದಾರೆ. ಮನೆಯವರು ಸ್ವಲ್ಪ ಹೊತ್ತು ಹುಡುಕಾಡಿ ಬಳಿಕ ಸುಳ್ಯದಿಂದ ಅಗ್ನಿಶಾಮಕ ಪಡೆಯವರನ್ನು ಕರೆಸಲಾಯಿತು. ರಾತ್ರಿ ಹೊತ್ತಿಗೆ ಹೆಣ್ಣು ಮಕ್ಕಳಿಬ್ಬರ ಶವಗಳು ಸಿಕ್ಕಿವೆ.
ನದಿಯ ಆಳ ತಿಳಿಯದೆ ನೀರಿಗಿಳಿದ ಬಾಲಕಿಯರು ಕಾಲು ಜಾರಿ ಬಿದ್ದು ನೀರು ಪಾಲಾದರು ಎನ್ನಲಾಗಿದೆ.
























