ಮತದಾರರಿಗೆ ಹಂಚಲು ತಂದಿದ್ದ ನೋಟಿನ ಬಂಡಲ್‌ಗಳು
ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಚಿಕ್ಕಲಸಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಮತದಾರರಿಗೆ ನಿನ್ನೆ ರಾತ್ರಿ ಹಣ ಹಂಚುತ್ತಿರುವ ಆರೋಪ ಕೇಳೆ ಬಂದಾಗ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು ಈ ಸಂದರ್ಭ ಮರದ ಬುಡದಲ್ಲಿ ನೋಟುಗಳ ಕಂತೆಯಿದ್ದ ಬ್ಯಾಗ್ ಪತ್ತೆಯಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹಣ ಹಂಚುವ ವಿಚಾರವಾಗಿ ಜಟಾಪಟಿ ಶುರುವಾಗಿದ್ದು, ಘಟನೆಯಿಂದ ಬಿಗುವಿನ ಸ್ಥಿತಿ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯಪುರ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್ನಿಂದ ಕಾಂಗ್ರೆಸ್ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮನೆ ಅಷ್ಟೇ ಅಲ್ಲದೆ ರಸ್ತೆ ಪಕ್ಕದೆಲ್ಲೆಲ್ಲ ಪೊಲೀಸರು ಹುಡುಕಾಡಿದ್ದು, ಈ ವೇಳೆ ಮರದ ಬುಡದಲ್ಲಿ ಪತ್ತೆಯಾದ ಬ್ಯಾಗ್ನಲ್ಲಿ 3 ಲಕ್ಷದಷ್ಟು ಹಣ ಸಿಕ್ಕಿದೆ. ನಂತರ ಕೆಲ ಕೈ, ಕಮಲ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ತಮಿಳುನಾಡಿನಿಂದ ಬಂದಿರುವ ಕೈ ಕಾರ್ಯಕರ್ತರು ಬಂದು ಹಣ ಹಂಚುತ್ತಿದ್ದಾರೆಂದು ಬಿಜೆಪಿ ಆರೋಪಿಸಿತ್ತು. ಪೊಲೀಸರು ಬರುತ್ತಿದ್ದಂತೆ ಹಣ ಎಸೆದು ಪರಾರಿಯಾಗಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಬೀದಿ ಬೀದಿಯಲ್ಲೂ ಹುಡುಕಾಟ ಮಾಡಿದ್ದು, ಕೆಲ ತಮಿಳುನಾಡಿನ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
























