ಪ್ರತಿ ಮತಗಟ್ಟೆಯ ಮೇಲಿರಲಿದೆ ಖಾಕಿ ಕಣ್ಗಾವಲು
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾನಕ್ಕೆ ಕೇವಲ 1 ದಿನ ಮಾತ್ರ ಬಾಕಿ ಇದೆ. ಶಾಂತಿಯುತ, ನಿರ್ಭೀತ ಹಾಗೂ ನ್ಯಾಯಯುತ ಮತದಾನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾನ ದಿನದಂದು 1,56,000 ಪೊಲೀಸ್ ಅಧಿಕಾರಿ,ಸಿಬ್ಬಂದಿಯನ್ನು ರಾಜ್ಯದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮತದಾನಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಸಲುವಾಗಿ ಚುನಾವಣಾ ಕರ್ತವ್ಯಕ್ಕೆಂದು 304 ಡಿವೈಎಸ್‍ಪಿಗಳು, 991 ಪಿಐಗಳು, 2,610 ಪಿಎಸ್‍ಐಗಳು, 5,803 ಎಎಸ್‍ಐಗಳು, 46,421 ಹೆಚ್‍ಸಿ/ಪಿಸಿಗಳು, 27,990 ಹೋಮ್‍ಗಾರ್ಡ್‍ಗಳು ಸೇರಿದಂತೆ ಒಟ್ಟು 84,119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ.
ಅವಶ್ಯಕತೆಗನುಗುಣವಾಗಿ ಅಧಿಕಾರಿ/ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಸುಮಾರು 8,500 ಪೊಲೀಸ್ ಅಧಿಕಾರಿ/ಸಿಬ್ಬಂದಿ, ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕಾಗಿ ಪಡೆಯಲಾಗಿದೆ. 650 ಸಿಎಪಿಎಫ್ ಕಂಪನಿಗಳ ಜೊತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ಸಹ ನಿಯೋಜಿಸಲಾಗಿದೆ.
11,417 ಸೂಕ್ಷ್ಮ ಮತಗಟ್ಟೆಗಳು

224 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 18,282 ಮತಗಟ್ಟೆಗಳಿದ್ದು, ಅದರಲ್ಲಿ 11,417 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಅನುಗುಣವಾಗಿ ಸೂಕ್ಷ್ಮ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.
2,930 ಸೆಕ್ಟರ್ ಮೊಬೈಲ್‌ಗಳು ಕಾರ್ಯಾಚರಣೆಯಲ್ಲಿದ್ದು, ಒಂದೊಂದು ಸೆಕ್ಟರ್ ಮೊಬೈಲ್‍ಗೆ 20 ಬೂತ್‍ಗಳನ್ನು ನಿಗದಿಪಡಿಸಲಾಗಿದೆ. ಪಿಎಸ್‌ಐ, ಎಎಸ್‍ಐ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಿಸಿ ನಿರಂತರ ಗಸ್ತು ಕೈಗೊಳ್ಳಲಾಗುತ್ತದೆ.
ಸೆಕ್ಟರ್ ಮೊಬೈಲ್‌ಗಳ ಮೇಲ್ವಿಚಾರಣೆಗಾಗಿ 749 ಮೇಲ್ವಿಚಾರಣಾ ಮೊಬೈಲ್‍ಗಳಿದ್ದು, ಮೇಲ್ವಿಚಾರಣಾ ಮೊಬೈಲ್‌ನ ಉಸ್ತುವಾರಿಗಾಗಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ನೇಮಿಸಿದ್ದು, ಈ ಅಧಿಕಾರಿ 4 ಸೆಕ್ಟರ್ ಮೊಬೈಲ್‍ಗಳ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಾರೆ. ಡಿವೈಎಸ್‍ಪಿ ದರ್ಜೆಯ ಅಧಿಕಾರಿಯ ಉಸ್ತುವಾರಿಯಲ್ಲಿ 236 ಉಪವಿಭಾಗೀಯ ಮೊಬೈಲ್‍ಗಳಿದ್ದು, ಒಂದು ಮೊಬೈಲ್‍ನಿಂದ ಒಂದು ವಿಧಾನಸಭಾಕ್ಷೇತ್ರವನ್ನು ನಿರ್ವಹಿಸಲಾಗುತ್ತಿದೆ.
ಮತದಾನ ದಿನದಂದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಮತ್ತು ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ 700ಕ್ಕೂ ಹೆಚ್ಚು ವಿಚಕ್ಷಣಾ ದಳಗಳನ್ನು ನೇಮಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನೊಳಗೊಂಡಂತೆ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಗಡಿಭಾಗದಲ್ಲಿ 700ಕ್ಕೂ ಹೆಚ್ಚು ಚೆಕ್‍ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಚುನಾವಣೆಯಲ್ಲಿ ನೆರೆ ರಾಜ್ಯಗಳಿಂದ ಅನಧಿಕೃತ ಹಣ, ಮದ್ಯ, ಉಚಿತ ಹಾಗೂ ಇತರೆ ವಸ್ತುಗಳು ಮತ್ತು ರೌಡಿಗಳು, ಸಮಾಜಘಾತುಕ ವ್ಯಕ್ತಿಗಳ ಚಲನವಲನದ ಬಗ್ಗೆ ಸೂಕ್ತ ನಿಗಾ ವಹಿಸುವ ಸಲುವಾಗಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.
























