ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಜಾಹೀರಾತು : ಡಿಕೆಶಿಗೆ ನೋಟಿಸ್‌

ಇಂದು ಸಂಜೆಯೊಳಗೆ ಆರೋಪ ಸಾಬೀತು ಮಾಡದಿದ್ದರೆ ಕಾನೂನು ಕ್ರಮದ ಎಚ್ಚರಿಕೆ

ಹೊಸದಿಲ್ಲಿ : ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಪತ್ರಿಕೆಗಳಲ್ಲಿ ಮೇ 6ರಂದು ಜಾಹೀರಾತು ನೀಡಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನ ಕುರಿತು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ. ಕಳೆದ ನಾಲ್ಕೇದು ವರ್ಷಗಳಲ್ಲಿ 40 ಪರ್ಸೆಂಟ್ ಸರ್ಕಾರ ಕರ್ನಾಟಕದ ಜನತೆಯಿಂದ 1,50,000 ಲಕ್ಷ ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ ಅಂತ ಜಾಹೀರಾತಿನಲ್ಲಿ ಕಾಂಗ್ರೆಸ್‌ ಆರೋಪಿಸಿತ್ತು.
ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ರಾಜ್ಯದ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ದರ ಕಾರ್ಡ್‌ ಎಂಬ ಶೀರ್ಷಿಕೆಯ ಜಾಹೀರಾತನ್ನು ಪ್ರಕಟಿಸಲಾಗಿತ್ತು.
ಈ ಬಗ್ಗೆ ನೋಟಿಸ್‌ ನೀಡಿರುವ ಭಾರತೀಯ ಚುನಾವಣಾ ಆಯೋಗ ನಿರ್ದಿಷ್ಟ ಆರೋಪಗಳನ್ನು ಪ್ರತ್ಯೇಕಿಸಬೇಕಾಗಿದೆ. ಆರೋಪಕ್ಕೆ ಮುನ್ನ ಪರಿಶೀಲಿಸಬೇಕಾಗಿದೆ. ಯಾವುದೇ ವಾಸ್ತವಿಕ ಆಧಾರವಿಲ್ಲದೆ, ನಿರ್ದಿಷ್ಟ ಆರೋಪಗಳನ್ನು ಮಾಡುವುದು ನಿಷೇಧಿಸಲ್ಪಟ್ಟಿದೆ ಎಂದು ಹೇಳಿದೆ.
ಈ ಜಾಹೀರಾತಿನಲ್ಲಿ ಮಾಡಿರುವ ಆರೋಪಗಳು ಸಾಮಾನ್ಯವಲ್ಲ. ಜಾಹೀರಾತು, ಅದರ ವಿಷಯ ಮತ್ತು ಸ್ವರೂಪದಲ್ಲಿ ಅತ್ಯಂತ ನಿರ್ದಿಷ್ಟವಾದ ಆರೋಪಗಳನ್ನು ಮಾಡಲಾಗಿದೆ. ಅಪನಂಬಿಕೆಯ ಭಾವನೆಯನ್ನು ಹುಟ್ಟುಹಾಕುವ ಮತ್ತು ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚುನಾವಣಾ ಆಯೋಗ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.
ಜಾಹೀರಾತಿನಲ್ಲಿ ಆಪಾದಿಸಿರುವ ಕಮಿಷನ್, ಹಗರಣ ಹಾಗೂ ಇತರೆ ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳನ್ನು ನೀಡಬೇಕೆಂದಿರುವ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಮೇ 7ರ ಸಂಜೆ 7 ಗಂಟೆಯವರಿಗೆ ಸಮಯ ನೀಡಿದೆ. ಒಂದು ವೇಳೆ ಪುರಾವೆಗಳನ್ನು ಒದಗಿಸಲು ವಿಫಲವಾದರೆ ಜನಪ್ರತಿನಿಧಿ ಕಾಯಿದೆ ಹಾಗೂ ಐಪಿಸಿ ಅಡಿಯಲ್ಲಿ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಇಸಿ ಹೇಳಿದೆ.
ಕಾಂಗ್ರೆಸ್‌ ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರಿಸಲು ವಿಫಲವಾದರೆ ಇವರ ಮಾಡಿರುವ ಆರೋಪಗಳು ಸುಳ್ಳು ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

















































error: Content is protected !!
Scroll to Top