ಕಾರ್ಕಳದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಲಾಭ ಯಾರಿಗೆ ?

ಗೆಲುವಿಗೆ ಇದೆ ನಾನಾ ಲೆಕ್ಕಾಚಾರ

ಕಾರ್ಕಳ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಈ ಸಲ ಕಾರ್ಕಳವೂ ಒಂದು. ಕಾಂಗ್ರೆಸ್‌ ಮುನಿಯಾಲು ಉದಯ ಕುಮಾರ್‌ ಶೆಟ್ಟಿಯವರಿಗೆ ಟಿಕೆಟ್‌ ಘೋಷಿಸುವುದರೊಂದಿಗೆ ಕಾರ್ಕಳದ ರಣಾಂಗಣದಲ್ಲಿ ಹೋರಾಟಕ್ಕೊಂದು ದಿಕ್ಕು ಸಿಕ್ಕಿದಂತಾಗಿದೆ. ಬಿಜೆಪಿಯಿಂದ ಸುನಿಲ್‌ ಕುಮಾರ್‌, ಕಾಂಗ್ರೆಸ್‌ನಿಂದ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಪಕ್ಷೇತರರಾಗಿ ಪ್ರಮೋದ್‌ ಮುತಾಲಿಕ್‌ ಪ್ರಮುಖ ಅಭ್ಯರ್ಥಿಗಳು ಎಂದು ಪರಿಗಣಿಸಬಹುದು. ಜೆಡಿಎಸ್‌ನಿಂದ ಶ್ರೀಕಾಂತ್‌ ಪೂಜಾರಿ ಸ್ಪರ್ಧಿಸುತ್ತಿದ್ದರೂ ಕಾರ್ಕಳದ ಮಟ್ಟಿಗೆ ಜೆಡಿಎಸ್‌ ಹೇಳಿಕೊಳ್ಳುವಂಥ ಬಲ ಹೊಂದಿರದಿರುವುದರಿಂದ ಅವರ ಸ್ಪರ್ಧೆ ಸಾಂಕೇತಿಕವಾಗಬಹುದು. ಕೆಲವೊಂದಿಷ್ಟು ಪಕ್ಷೇತರ ಅಭ್ಯರ್ಥಿಗಳು ಪ್ರತಿವರ್ಷ ಕಣದಲ್ಲಿ ಇರುತ್ತಾರೆ. ಆದರೆ, ಅವರಿಗೆ ಇಡಗಂಟು ಉಳಿಯುವುದು ಕೂಡ ಇಲ್ಲ. ಇಲ್ಲಿ ಸ್ಪರ್ಧೆ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ.

ತ್ರಿಕೋನ ಸ್ಪರ್ಧೆ
ಈ ಸಲ ಕಾರ್ಕಳಕ್ಕೆ ಮುತಾಲಿಕ್‌ ಎಂಟ್ರಿಯಿಂದ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಆದರೆ, ಅದು ಮುತಾಲಿಕ್‌ ಎಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ. ಉದಯ ಕುಮಾರ್‌ ಶೆಟ್ಟಿಯವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿರುವುದರಿಂದ ಜಾತಿ ಲೆಕ್ಕಾಚಾರ ಮುನ್ನೆಲೆಗೆ ಬಂದಿದ್ದರೂ ಅದು ಅಂತಿಮವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆ ಎನ್ನಬಹುದು. ಕಾರ್ಕಳ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವುದು ಬಿಲ್ಲವರು, ನಂತರದ ಸ್ಥಾನದಲ್ಲಿ ಬಂಟರಿದ್ದಾರೆ. ಉಳಿದ ಸಮುದಾಯಗಳ ಮತಗಳು ನಿರ್ಣಾಯಕವಾಗಲಿದೆ.
ಕಾಂಗ್ರೆಸ್‌ ಕಾರ್ಕಳದಲ್ಲಿ ತನ್ನದೇ ಆದ ಸಾಂಪ್ರದಾಯಿಕ ಮತ ಹೊಂದಿದೆ. ಅಂತೆಯೇ ಬಿಜೆಪಿಯಲ್ಲೂ ಸಾಂಪ್ರದಾಯಿಕ ಮತವಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಒಂದಷ್ಟು ಮತ ಪಡೆಯಲಿದ್ದಾರೆ. ಕಾರ್ಕಳದಲ್ಲಿ ಗೆಲುವಿನ ಅಂತರ ದೊಡ್ಡ ಮಟ್ಟದಲ್ಲಿರುವುದಿಲ್ಲ. ಇದು ಬಹಳ ತುರುಸಿನ ಹಣಾಹಣಿಯ ಕ್ಷೇತ್ರ. 2018ರ ಚುನಾವಣೆಯೊಂದೇ ಇದಕ್ಕೆ ವ್ಯತಿರಿಕ್ತವಾಗಿತ್ತು. ಅಂದು ಉದಯ ಶೆಟ್ಟಿ ಅವರಿಗೆ ಟಿಕೆಟ್‌ ದೊರೆಯದ ಕಾರಣ ಅವರ ಅಭಿಮಾನಿಗಳು, ಆಪ್ತರು ಮುನಿಸಿಕೊಂಡಿದ್ದರು.

ಈ ಬಾರಿ ಕಾರ್ಕಳ ಕ್ಷೇತ್ರದ ಕದನ ಬಹಳ ಕುತೂಹಲಕಾರಿಯಾಗುವ ಸಾಧ್ಯತೆ ಕಾಣುತ್ತದೆ. ಪಕ್ಷೇತರರಾಗಿರುವ ಪ್ರಮೋದ್‌ ಮುತಾಲಿಕ್‌ಗೆ ಬಿಜೆಪಿಯ ಸಾಂಪ್ರದಾಯಿಕ ಹಿಂದುತ್ವದ ಮತಗಳನ್ನು ವಿಭಜಿಸಲು ಸಾಧ್ಯವಾದರೆ ಅದರ ಹೊಡೆತ ಬಿಜೆಪಿ ಮೇಲಾಗಲಿದೆ.
ಸುನಿಲ್‌ ಕುಮಾರ್‌ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ನೆಲೆಯಲ್ಲೇ ಮತ ಕೇಳುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಅವರನ್ನು ಈ ಸಲ ದೂರುವಂತಿಲ್ಲ. ಹಲವು ಯೋಜನೆಗಳು ಕಣ್ಣ ಮುಂದಿವೆ. ಧಾರಾಳ ಅನುದಾನ ಹರಿದುಬಂದಿದೆ. ಕ್ಷೇತ್ರದ ಜನರ ಜತೆ ಸದಾ ಇರುತ್ತಾರೆ ಎಂಬ ಹೆಗ್ಗಳಿಕೆಯಿದೆ. ಅತ್ತ ಉದಯ ಕುಮಾರ್‌ ಶೆಟ್ಟಿಯವರು ಅನೇಕ ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿ ಇರುವವರು. ಸಾಕಷ್ಟು ಸ್ಥಿತಿವಂತರಾಗಿರುವ ಅವರು ದಾನ ಧರ್ಮಗಳಲ್ಲಿ ಎತ್ತಿದ ಕೈ. ಬಡಬಗ್ಗರಿಗೆ ಕೈಲಾದ ನೆರವು ನೀಡುತ್ತಾರೆ ಎಂಬ ಸದಭಿಪ್ರಾಯ ಹೊಂದಿದ್ದಾರೆ. ಪಕ್ಷದ ಮತಗಳು ಮಾತ್ರವಲ್ಲದೆ ವೈಯಕ್ತಿಕ ವರ್ಚಸ್ಸಿನ ಮತಗಳೂ ಅವರಿಗೆ ಇವೆ ಎನ್ನುವುದು ಪ್ರಚಲಿತದಲ್ಲಿರುವ ಮಾತು. ಹೀಗಾಗಿ ಯಾವ ಮತ ಯಾರ ಕಡೆ ವಾಲುತ್ತದೆ ಎನ್ನುವುದನ್ನು ಈಗಲೇ ಅಂದಾಜಿಸುವುದು ಅಸಾಧ್ಯ. ಈ ಅಂಶವೇ ಕಾರ್ಕಳ ಕ್ಷೇತ್ರದಲ್ಲಿ ಕದನ ಕುತೂಹಲ ಕೆರಳಿಸಿರುವುದು.

ನಾಮ ಪತ್ರ ಸಲ್ಲಿಕೆ
ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಜೆಡಿಎಸ್‌ ಅಭ್ಯರ್ಥಿ ‍ಶ್ರೀಕಾಂತ್‌ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಮುತಾಲಿಕ್‌ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬುಧವಾರ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಸಲಿರುವರು.

















































error: Content is protected !!
Scroll to Top