ಹೆಬ್ರಿ : ರಾಪಿಡ್ ಇನ್ಸ್ಟಿಟ್ಯೂಟ್ ಆಪ್ ಅಬಾಕಸ್ ಸಂಸ್ಥೆ ವತಿಯಿಂದ ಏ. 30 ರವರೆಗೆ ನಡೆಯಲಿರುವ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಏ. 12ರಂದು ಹೆಬ್ರಿ ಸಮಾಜ ಮಂದಿರದಲ್ಲಿ ಜರುಗಿತು. ಹೆಬ್ರಿ ಗ್ರಾ. ಪಂ. ಪಿ. ಡಿ. ಓ ಸದಾಶಿವ ಸೇರ್ವೆಗಾರ್ ಶಿಬಿರ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ವಲಯ ಶಿಕ್ಷಣ ಸಂಯೋಜಕ ಪ್ರವೀಣ್ ಶೆಟ್ಟಿ ಮಾತನಾಡಿ, ಶಿಬಿರದಲ್ಲಿನ ಪಠ್ಯೇತರ ಚಟುವಟಿಕೆಗಳಿಂದಾಗಿ ಮಕ್ಕಳ ಬೌದ್ಧಿಕ ಗುಣಮಟ್ಟ ಹೆಚ್ಚಳವಾಗಲಿದೆ. 150 ಕ್ಕೂ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಶಿಬಿರದಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದು ಅಭಿಪ್ರಾಯಪಟ್ಟರು. ಹೆಬ್ರಿ ಮೈಸ್ ಕಂಪ್ಯೂಟರ್ ಸೆಂಟರ್ನ ಸಂಚಾಲಕ ಕಬ್ಬಿನಾಲೆ ರಾಮಚಂದ್ರ ಭಟ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ನೋಂದಣಿಗೆ ಇನ್ನೂ ಅವಕಾಶ
ಶಿಬಿರದಲ್ಲಿ ವಿಶೇಷ ತರಬೇತುದಾರರಿಂದ ನೃತ್ಯ, ಸಂಗೀತ, ಚಿತ್ರ ಕಲೆ, ಪೈಂಟಿಂಗ್, ಕ್ರಾಫ್ಟ್, ಕುಣಿತ ಭಜನೆ, ಯೋಗ, ಆರೋಗ್ಯ ಮೊದಲಾದವುಗಳ ಕುರಿತಾಗಿ ತರಬೇತಿ ನೀಡಲಾಗುತ್ತದೆ ಮತ್ತು ವಿವಿಧ ಚಟುವಟಿಕೆಗಳು ಹಾಗೂ ಸ್ಪರ್ಧೆಗಳು ನಡೆಯುತ್ತದೆ.
ಏ. 30 ರವರೆಗೆ ನಡೆಯುವ ಈ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳು ಇನ್ನೂ ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ಸುನಿತಾ ಹೆಬ್ಬಾರ್ ಹೇಳಿದರು. ಶಿಕ್ಷಕಿ ಅಮೃತ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಶಿಕ್ಷಕಿಯರು ಮತ್ತು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.











































