ಕಾರ್ಕಳ : ಬಿಸಿ ನೀರಿಗೆ ಅಳವಡಿಸಿದ ಗ್ಯಾಸ್ ಗೀಜರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ವ್ಯಕ್ತಿವೋರ್ವರು ಸಾವಿಗೀಡಾದ ಘಟನೆಯು ಕಾರ್ಕಳ ಕಸಬಾ ಗ್ರಾಮದ ವೆಂಕಟರಮಣ ದೇವಸ್ಥಾನದ ಬಳಿ ಸಂಭವಿಸಿದೆ. ಪ್ರಕಾಶ್ ಮಲ್ಯ (74) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಏ. 8ರಂದು ಮುಂಜಾನೆ ಸ್ನಾನ ಮಾಡುತ್ತಿರುವಾಗ ಬಿಸಿ ನೀರಿಗೆ ಅಳವಡಿಸಿದ ಗ್ಯಾಸ್ ಗೀಜರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಪ್ರಕಾಶ್ ಅವರ ಮೈಗೆ ಬೆಂಕಿ ತಗುಲಿದ್ದು, ತೀವ್ರ ಸ್ವರೂಪದ ಸುಟ್ಟ ಗಾಯವಾಗಿ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಿಲಿಸಲಾಗಿದ್ದು, ಏ. 12ರಂದು ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಮಲ್ಯ ಅವರು ಮೃತಪಟ್ಟಿರುತ್ತಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಯಿಗೆ ವಿಚಾರ ತಗಾದೆ – ವ್ಯಕ್ತಿಗೆ ಹಲ್ಲೆ
ಹೆಬ್ರಿ : ಹೊಯಿಗೆ ತೆಗೆಯುವ ವಿಚಾರಕ್ಕೆ ಸಂಭಂಧ ಪಟ್ಟಂತೆ ವ್ಯಕ್ತಿವೋರ್ವರಿಗೆ ಬೆದರಿಕೆಯೊಡ್ಡಿರುವ ಘಟನೆ ಮುದ್ರಾಡಿ ಭಕ್ರೆಮಠ ಎಂಬಲ್ಲಿ ನಡೆದಿದೆ. ಏ.11 ರಂದು ಮುದ್ರಾಡಿ ಗ್ರಾಮದ ರವೀಂದ್ರ ಎಂಬುವವರು ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಉಪ್ಪಳದಿಂದ ಮುದ್ರಾಡಿ ಕಡೆಗೆ ಸಾಗುತ್ತಿದ್ದು, ಭಕ್ರೆಮಠ ಎಂಬಲ್ಲಿ ತಲುಪಿದಾಗ, ಸತೀಶ ಎಂಬುವವರು ಇವರಿಬ್ಬರನ್ನು ತಡೆದು ನಿಲ್ಲಿಸಿ ರವೀಂದ್ರ ಬಳಿ ಹೊಯಿಗೆ ತೆಗೆಯುವ ವಿಚಾರದಲ್ಲಿ ತಕರಾರು ಮಾಡಿ ಅವಾಚ್ಯ ಶಬ್ದದಿಂದ ಬೈಯ್ದು, ಕತ್ತಿಯನ್ನು ತೋರಿಸಿ ಹಲ್ಲೆ ನಡೆಸಲು ಯತ್ನಿಸಿರುವುದಾಗಿ ರವೀಂದ್ರ ಅವರು ಸತೀಶ ಅವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.









































