ಬಂಡಿಮಠದಿಂದ ಮುಖ್ಯ ನಿಲ್ದಾಣಕ್ಕೆ ಬರಲು ನಿರಾಕರಣೆ
ದೂರದೂರುಗಳಿಂದ ಬರುವ ಪ್ರಯಾಣಿಕರಿಗೆ ನಿತ್ಯ ಸಂಕಷ್ಟ
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳನ್ನು ಜನರು ಹೆಚ್ಚು ಅವಲಂಬಿಸುತ್ತಾರೆ. ಆದರೆ ಸರಕಾರಿ ಬಸ್ಸುಗಳನ್ನು ಅವಲಂಬನೆ ಮಾಡುವ ಜನರ ಸಂಖ್ಯೆಯೂ ಭಾರಿ ದೊಡ್ಡ ಸಂಖ್ಯೆಯಲ್ಲಿ ಇದೆ. ಉಡುಪಿ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಬಹಳ ದೊಡ್ಡ ಪ್ರಮಾಣದಲ್ಲಿ ಇದ್ದು, ಇವತ್ತಿಗೂ ಅವರು ಕೆಂಪು ಬಸ್ಸುಗಳ ಸೇವೆಯನ್ನು ಹೆಚ್ಚು ಅವಲಂಬನೆ ಮಾಡುತ್ತಾರೆ.
ಹುಬ್ಬಳ್ಳಿ, ಗದಗ, ಬೆಳಗಾವಿ, ಕುಮಟಾ, ಹೊನ್ನಾವರ, ಶಿರಸಿ, ಧಾರವಾಡ, ಗೋವಾ, ಬಿಜಾಪುರ, ಗುಲ್ಬರ್ಗ, ಅಂಕೋಲಾ ಮೊದಲಾದ ಕಡೆಯಿಂದ ಧರ್ಮಸ್ಥಳಕ್ಕೆ ಸರಕಾರಿ ಕೆಂಪು ಬಸ್ಸುಗಳು ಕಾರ್ಕಳದ ಮೂಲಕವೇ ಹಾದುಹೋಗಬೇಕು. ಹಗಲು ಹೊತ್ತು ಆ ಬಸ್ಸುಗಳು ಬಂಡಿಮಠದಿಂದ ಕಾರ್ಕಳ ಮುಖ್ಯ ಬಸ್ಸು ನಿಲ್ದಾಣಕ್ಕೆ ಬಂದು ಮುಂದೆ ಹೋಗುತ್ತವೆ. ಕಾರ್ಕಳದಲ್ಲಿ ಈ ಬಸ್ಸುಗಳಿಗೆ ಕಾದು ಕುಳಿತುಕೊಳ್ಳುವ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ವಾರಾಂತ್ಯದಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯದ ಕಡೆಗೆ ಹೋಗುವ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಆದರೆ ರಾತ್ರಿ ಹೊತ್ತು ಉತ್ತರ ಕರ್ನಾಟಕದ ಕಡೆಯಿಂದ ಬಂದು ಕಾರ್ಕಳದಲ್ಲಿ ಇಳಿಯುವ ಪ್ರಯಾಣಿಕರ ಕಷ್ಟವನ್ನು ಯಾರೂ ಗಮನಿಸುವುದಿಲ್ಲ.
ಹಗಲು ಹೊತ್ತು ಎಲ್ಲ ಕೆಂಪು ಬಸ್ಸುಗಳು ಕಾರ್ಕಳ ಪೇಟೆಯ ಮೂಲಕ ಮುಖ್ಯ ಬಸ್ಸು ನಿಲ್ದಾಣಕ್ಕೆ ಬಂದೇ ಮುಂದೆ ಹೋಗುತ್ತವೆ. ಆದರೆ ಮಧ್ಯರಾತ್ರಿ ಬರುವ ಬಸ್ಸುಗಳು ಬಂಡಿಮಠದಲ್ಲಿ ಪ್ರಯಾಣಿಕರನ್ನು ಬಲವಂತವಾಗಿ ಇಳಿಸಿ ಬೈಪಾಸ್ ಮೂಲಕ ಮುಂದೆ ಹೋಗುತ್ತವೆ. ಪ್ರಯಾಣಿಕರು ಎಷ್ಟು ಗೋಗರೆದರೂ ಆ ಬಸ್ಸುಗಳು ಮುಖ್ಯ ನಿಲ್ದಾಣಕ್ಕೆ ಬರುವುದೇ ಇಲ್ಲ.
ರಾತ್ರಿ 2-3 ಗಂಟೆ ವೇಳೆಗೆ ಬಂಡಿಮಠದಲ್ಲಿ ಇಳಿಸಿಹೋದರೆ ಪ್ರಯಾಣಿಕರ ಕಷ್ಟ ಊಹೆ ಮಾಡಿಕೊಳ್ಳಿ. ಹೆಂಗಸರು, ಮಕ್ಕಳು, ವೃದ್ಧರು ಮಧ್ಯರಾತ್ರಿ ಬಸ್ಸಿನಿಂದ ಇಳಿದು ಎಲ್ಲಿಗೆ ಹೋಗಬೇಕು?
ರಾತ್ರಿ ಹೊತ್ತು ಬಂಡಿಮಠ ಖಂಡಿತ ಸುರಕ್ಷಿತ ತಾಣ ಅಲ್ಲ. ಅಲ್ಲಿ ಪೊಲೀಸ್ ಬೀಟ್ ಅಥವ ಚೆಕ್‌ಪೋಸ್ಟ್ ಇಲ್ಲ. ವಿಶ್ರಾಂತಿ ಪಡೆಯಲು ಕೊಠಡಿ ಇಲ್ಲ. ಹೆಂಗಸರಿಗೆ ಶೌಚಾಲಯದ ವ್ಯವಸ್ಥೆ ಸರಿಯಾಗಿ ಇಲ್ಲ. ಬೆಳಿಗ್ಗೆ 6 ಗಂಟೆಯವರೆಗೆ ಆಟೋ ದೊರೆಯುವುದಿಲ್ಲ. ಕೆಂಪು ಬಸ್ಸುಗಳಿಗೆ ಶಾಪ ಹಾಕುತ್ತಾ ಆ ಪ್ರಯಾಣಿಕರು, ಸಣ್ಣ ಮಕ್ಕಳು, ಹೆಂಗಸರು ಬಂಡಿಮಠದ ಬಸ್ಸು ನಿಲ್ದಾಣದಲ್ಲಿ ಮೈಮುದುರಿ ಮಲಗುವ ದೃಶ್ಯ ನೋಡುವಾಗ ನಿಜಕ್ಕೂ ಅಯ್ಯೋ ಅನ್ನಿಸುತ್ತದೆ.
ಉತ್ತರ ಕರ್ನಾಟಕದ ಕಡೆಯಿಂದ ಕೆಂಪು ಬಸ್ಸುಗಳಲ್ಲಿ ಕಾರ್ಕಳಕ್ಕೆ ಬರುವ ಹೆಚ್ಚಿನವರು ಕೂಲಿ ಕಾರ್ಮಿಕರು ಮತ್ತು ಬಡವರು. ಅವರು ಆ ಮಧ್ಯರಾತ್ರಿ ಏನು ಮಾಡಬೇಕು? ಅದೇ ಕೆಂಪು ಬಸ್ಸುಗಳು ಕಾರ್ಕಳ ಬಸ್ಸು ನಿಲ್ದಾಣದವರೆಗೆ ಬಂದರೆ ಅಲ್ಲಿ ಕನಿಷ್ಠ ವಿಶ್ರಾಂತಿ ಕೊಠಡಿ, ಶೌಚಾಲಯ ಇದೆ. ಸ್ವಲ್ಪ ದೂರ ನಡೆದುಕೊಂಡಾದರೂ ಅವರು ಮನೆಗೆ ಹೋಗಬಹುದು. ಅಲ್ಲಿ ನಾಲ್ಕು ಗಂಟೆ ಹೊತ್ತಿಗೆ ಜನಸಂಚಾರ ಆರಂಭ ಆಗುತ್ತದೆ. ಆಟೋಗಳು ಓಡಾಡುತ್ತವೆ.
ಬಂಡಿಮಠದಲ್ಲಿ ಅದ್ಯಾವುದೂ ಇಲ್ಲ. ಇದು ಇಡೀ ವರ್ಷದ ಗೋಳು. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಕಠಿಣ ಆಗ್ತದೆ.
ಬಂಡಿಮಠದಲ್ಲಿ ಮಧ್ಯರಾತ್ರಿ ಪ್ರಯಾಣಿಕರನ್ನು ಬಲವಂತವಾಗಿ ಇಳಿಸಿಹೋಗುವ ಕೆಂಪು ಬಸ್ಸುಗಳ ಸಿಬ್ಬಂದಿಗೆ ಇದ್ಯಾವುದೂ ಅರ್ಥ ಆಗುವುದಿಲ್ಲ. ಮುಂದೆ ದೊಡ್ಡ ಅನಾಹುತ ಸಂಭವಿಸುವ ಮೊದಲು ಸರಕಾರ, ಜನಪ್ರತಿನಿಧಿಗಳು ಎಚ್ಚರ ಆಗುವುದು ಒಳಿತು.


























