ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಏ.10ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏ.7ರಂದು ಗದಗ ಜಿಲ್ಲೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮೊದಲ ವರ್ಷಧಾರೆಯಾಗಿದೆ. ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಸಿಡಿಲು ಸಹಿತ ಮಳೆಯಾಗಿದೆ. ಈ ವೇಳೆ ಜಮೀನಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಇಬ್ಬರು ಯುವಕರಿಗೆ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶರಣಪ್ಪ ಪುರದ (20), ದೇವರಾಜ್ ಬಾಡಗಿ (16) ಮೃತಪಟ್ಟವರು. 12 ವರ್ಷದ ಸುನೀಲ್ ಪುರದ ಎಂಬ ಬಾಲಕನಿಗೂ ಗಾಯಗಳಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ನಾಲ್ಕು ಕುರಿಗಳು, ಒಂದು ಆಡು ಕೂಡ ಸಾವನ್ನಪ್ಪಿವೆ. ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಗುಡುಗು ಸಿಡಿಲು ಸಹಿತವಾಗಿ ಆಲಿಕಲ್ಲು ಮಳೆಯಾಗಿದ್ದು. ಮುಂಡರಗಿ ತಾಲೂಕಿನ ಗೊಮ್ಮಗೊಳ್ಳ ಗ್ರಾಮದಲ್ಲಿ ಭಾರೀ ಮಳೆಯಾಗಿದೆ.
ಬಾಗಲಕೋಟೆಯಲ್ಲಿ ಮನೆಗೆ ಬಡಿದ ಸಿಡಿಲು, ಇಬ್ಬರು ಸಾವು
ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಿದ್ದು, ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಇಬ್ಬರು ಮಹಿಳೆಯರು ದುರ್ಮರಣ ಹೊಂದಿದ್ದಾರೆ. ಯಂಕುಬಾಯಿ ಕುಲಕರ್ಣಿ (29), ಶಾರದಾ ಪತ್ತಾರ (61) ಮೃತಪಟ್ಟವರಾಗಿದ್ದಾರೆ. ಜಾಲಿಹಾಳ ಗ್ರಾಮದಲ್ಲಿ ನಿನ್ನೆ ರಾತ್ರಿ 11.30ರ ಸುಮಾರಿಗೆ ಮನೆಗೆ ಸಿಡಿಲು ಬಡಿದಿದ್ದು, ಕ್ಷಣಾರ್ಧದಲ್ಲೇ ಮೇಲ್ಛಾವಣಿ ಕುಸಿದು ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಶವಗಳನ್ನು ಹೊರತೆಗೆದಿದ್ದು, ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಪ್ಪಳದಲ್ಲಿ ಈ ವರ್ಷದ ಮೊದಲ ವರ್ಷಧಾರೆ
ಜಿಲ್ಲೆಯಲ್ಲಿ ಈ ವರ್ಷದ ಮೊದಲ ವರ್ಷಧಾರೆಯಾಗಿದ್ದು, ಜೋರಾದ ಗಾಳಿಯೊಂದಿಗೆ ಮಳೆ ಆರಂಭವಾಗಿದೆ. ಬೆಳಿಗ್ಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿತ್ತು. ಕೊಪ್ಪಳ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದು, ತೀವ್ರ ಗಾಳಿ ಬೀಸಿ ಮನೆಗಳ ತಗಡು ಹಾರಿಹೋಗಿದ್ದು, ಕೆಲವು ಚಪ್ಪರಗಳು ಕಿತ್ತು ಬಿದ್ದಿವೆ. ರೈತರ ಜಮೀನು ಹಾಗೂ ರಸ್ತೆಗಳ ಪಕ್ಕದಲ್ಲಿನ ಗಿಡಗಳು ಧರೆಗುರುಳಿವೆ. ಅಧಿಕ ಗಾಳಿಯಿಂದಾಗಿ ಕೆಲವು ಪ್ರದೇಶದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಹಲವು ಕಡೆ ವಿದ್ಯುತ್ ಕಡಿತವಾಗಿದೆ.

ಬೆಳ್ತಂಗಡಿ ಸುತ್ತ-ಮುತ್ತ ಆಲಿಕಲ್ಲು ಮಳೆ
ಬೆಳ್ತಂಗಡಿ ತಾಲೂಕಿನ ಹಲವೆಡೆ ಏ.7ರಂದು ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ. ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ಚಾರ್ಮಾಡಿ, ನಾರಾವಿ ಸಹಿತ ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಮಳೆ ಪರಿಣಾಮ ಕೆಲವೆಡೆ ವಿದ್ಯುತ್ ಕಂಬಗಳು ಧರಶಾಹಿಯಾಗಿದೆ. ಬೇಸಗೆ ಬಿಸಿಯಿಂದ ಅಂತರ್ಜಲ ಬರಿದಾಗಿ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಕೃಷಿಕರು ಕಂಗೆಟ್ಟಿದ್ದು, ಮಳೆಯಿಂದಾಗಿ ವಾತಾವರಣ ತಂಪೇರಿದೆ.
























