ಜಿಲ್ಲಾ ಮಲೆಕುಡಿಯ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಆಶೀರ್ವಚನ
ಕಾರ್ಕಳ : ಪ್ರತಿಯೊಬ್ಬರು ಉತ್ತಮ ಶಿಕ್ಷಣವನ್ನು ಹೊಂದಿ ಮುಂದೆ ಒಳ್ಳೆಯ ಸಮಾಜ ಕಟ್ಟುವ ಸತ್ಪ್ರಜೆಗಳಾಗಿ ಬೆಳೆಯಬೇಕು. ಆ ಮುಖೇನ ಅಭಿವೃದ್ಧಿ ಹೊಂದಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಿಕ್ಷಣದ ಜತೆಗೆ ಸರಕಾರಿ ಸೌಲಭ್ಯಗಳು ದೊರಕಿದಾಗ ಸಾಮಾಜಿಕ, ಸಮಾನತೆಗೆ ಅರ್ಥ ಬರುತ್ತದೆ ಎಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಳ ಪೇರಡ್ಕದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ವ್ಯವಸ್ಥಾಪಕರಾದ ವಿಶ್ವನಾಥ ಶೆಟ್ಟಿಯವರು ಉದ್ಘಾಟಿಸಿ, ತಮ್ಮ ಇಲಾಖೆಯಿಂದ ಮಲೆಕುಡಿಯರಿಗೆ ಇರುವ ಸೌಲಭ್ಯವನ್ನು ವಿಳಂಬ ಮಾಡದೆ ಕೊಡಲಾಗಿದೆ. ಇನ್ನು ಮುಂದೆ ಕೂಡ ಸೌಲಭ್ಯಗಳನ್ನು ಸಂಘಟನೆಯ ಮೂಲಕ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಮಾಜಿಕ ಹೋರಾಟಗಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ, ಪಶ್ಚಿಮಘಟ್ಟ ವ್ಯಾಪ್ತಿಗೆ ಸಂಬಂಧಿಸಿದ ಜನವಿರೋಧಿ ಯೋಜನೆಗಳು ಬಂದಾಗ ಅವರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಜಿಲ್ಲಾ ಮಲೆಕುಡಿಯ ಸಂಘ ಹೋರಾಟ ಮಾಡಿಕೊಂಡು ಬಂದಿರುವುದನ್ನು ನೆನಪಿಸಿದರು. ಮುಂದಿನ ದಿನಗಳಲ್ಲಿ ಕೂಡ ನ್ಯಾಯಬದ್ಧ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು. ಅನಾರೋಗ್ಯ ಪೀಡಿತರಿಗೆ ಸಹಾಯ ಧನ ವಿತರಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. True Love Never End ಎನ್ನುವ ತುಳು ಆಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಗಂಗಾಧರ ಗೌಡ ಈದು ಅಧ್ಯಕ್ಷತೆ ವಹಿಸಿದ್ದು,ಪ್ರಸ್ತಾವನೆ ಗೈದು ಸ್ವಾಗತಿಸಿದರು. ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ. ಎಸ್. ಇಮ್ತಿಯಾಜ್ ಅಹಮ್ಮದ್, ಉಡುಪಿ ಜಿಲ್ಲಾ ಮರಾಠಿ ಸಂಘದ ನಿಕಟಪೂರ್ವ ಅಧ್ಯಕ್ಷ ಅನಂತ ನಾಯ್ಕ, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಮಲೆಕುಡಿಯ ಸಂಘದ ಸ್ಥಾಪಕಾದ್ಯಕ್ಷ ಶ್ರೀಧರ ಗೌಡ ಈದು, ಸಮೂಹ ಸಂಪನ್ಮೂಲ ವ್ಯಕ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಜಗೋಳಿ ವಲಯದ ಕೃಷ್ಣಕುಮಾರ್ ಎನ್.ಇ., ಉಜಿರೆ ನಿವೃತ್ತ ಹಿರಿಯ ಮ್ಯಾನೇಜರ್ ಪರಮೇಶ್ವರ, ಪ್ರಧಾನ ಕಾರ್ಯದರ್ಶಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ – ಕೇರಳದ ಕೆ. ಪುತ್ರನ್, ಅಖಿಲ ಕೇರಳ ಮಲೆಕುಡಿ – ಕುಡಿಯ ಸೇವಾ ಸಂಘ ಅಧ್ಯಕ್ಷ ಮಾಧವ ಕೊಜಪ್ಪೆ, ದಕ್ಷಿಣ ಕನ್ನಡ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರು ಉಪಸ್ಥಿತರಿದ್ದರು.
ರಾಧಾ ಪ್ರಾರ್ಥಿಸಿದರು. ಸೌಮ್ಯ ವರದಿ ವಾಚಿಸಿ, ಪುಷ್ಪಾ ಶ್ರೀಧರ್ ನಿರೂಪಿಸಿ, ಸರೋಜಿನಿ ಸದಾನಂದ ವಂದಿಸಿದರು.









































