ಕಾರ್ಕಳ : ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.2ರಂದು ಸಂಭವಿಸಿದೆ. ಸೀಮಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬೈಂದೂರು ಮೂಲದವರಾದ ಇವರು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಮಧ್ಯಾಹ್ನ ಹಾಸ್ಟೆಲ್‌ನ ತನ್ನ ಕೊಠಡಿಯಲ್ಲಿ ಫ್ಯಾನ್‌ಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೀಮಾ ಸುಮಾರು ೫ ತಿಂಗಳ ಹಿಂದೆ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿದ್ದೆ ಮಾತ್ರೆ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಕಾಲೇಜಿಗೆ ಬರಲಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಸೀಮಾ ಕೋಣೆಯಲ್ಲಿ ಒಬ್ಬಳೇ ಇರುವಾಗ ಫ್ಯಾನ್‌ಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿಯಾಗಿ ಸವಾರರಿಗೆ ಗಾಯ
ಕಾರ್ಕಳ : ಬೋಳ ಗ್ರಾಮದ ಬೋಳ ಪದವು ಎಂಬಲ್ಲಿ ಬುಧವಾರ ಬೈಕ್‌ಗಳು ಡಿಕ್ಕಿಯಾಗಿ ಸವಾರ ಗಣೇಶ್ ಪ್ರಸಾದ್ (25) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣೇಶ್ ಪ್ರಸಾದ್ ಅವರು ಬೆಳಗ್ಗೆ 8.30 ಹೊತ್ತಿಗೆ ಬೈಕ್‌ನಲ್ಲಿ ಕಾಲೇಜಿಗೆ ಹೋಗುವಾಗ ಮಂಜರಪಲ್ಕೆ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದೆ. ವಿನೋದ್ ಎಂಬವರು ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಎರಡೂ ಬೈಕಿನ ಸವಾರರು ರಸ್ತೆಗೆ ಬಿದ್ದು, ಗಣೇಶ್ ಪ್ರಸಾದ್ ಅವರ ಬಲಕಾಲಿನ ಮೂಳೆ ಮುರಿದಿದೆ. ವಿನೋದ ಮತ್ತು ಅವರ ಬೈಕಿನ ಹಿಂಬದಿ ಸವಾರ ಗಾಯಗೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಿನಿ ಬಸ್ ಚರಂಡಿಗೆ ಬಿದ್ದು ಮಗುವಿಗೆ ಗಾಯ
ಹೆಬ್ರಿ : ಆಗುಂಬೆ ಘಾಟಿಯ ಒಂದನೇ ತಿರುವಿನಲ್ಲಿ ಮಿನಿ ಬಸ್ ಚರಂಡಿಗೆ ಪಲ್ಟಿಯಾದ ಪರಿಣಾಮ 7 ತಿಂಗಳ ಮಗುವೊಂದು ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಚಾಲಕ ಗ್ರೆಗೊರಿ ಪಿಂಟೊ ಅವರು ಮಿನಿ ಬಸಸ್ಸನ್ನು ಅತಿವೇಗವಾಗಿ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಮಾವಿಜಕಟ್ಟೆ, ಕುಕ್ಕುಂಜೆಯ ನಿವಾಸಿ ಅಬ್ದುಲ್ ಅಜೀಜ್ ಎಂಬವರು ಕುಟುಂಬವರೊಂದಿಗೆ ಕಾರ್ಯಕ್ರಮ ಮುಗಿಸಿ ಮಿನಿ ಬಸ್‌ನಲ್ಲಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಿನಿಬಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬದಿಯ ಕಚ್ಚಾರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದೆ. 7 ತಿಂಗಳ ಮಗು ಅಲಿಮಾ ಸುಲ್ತಾನ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










































