ಬುಕ್ ಮಾಡಿದ ಫ್ಲ್ಯಾಟ್ ಕೊಡದೆ ವಂಚಿಸಿದ ಆರೋಪ
ಮುಂಬಯಿ : ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಮುಂಬಯಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್ ರಾಯಭಾರಿಯಾಗಿರುವ ತುಳಸಿಯಾನಿ ಕಂಪನಿ ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.
ಮುಂಬಯಿಯ ಅಂಧೇರಿ ಪೂರ್ವದ ನಿವಾಸಿ ಕಿರಿತ್ ಜಸ್ವಂತ್ ಸಾಹ್ ಎಂಬವರು ತುಳಸಿಯಾನಿ ಕಂಪನಿಯ ನಿರ್ಮಾಣದ ಬಹುಮಹಡಿ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇದಕ್ಕಾಗಿ ಅವರು 86 ಲಕ್ಷ ರೂ. ಒಪ್ಪಂದ ಮಾಡಿಕೊಂಡಿದ್ದರು. ಕಂಪನಿ ನಿರ್ಮಿಸುತ್ತಿರುವ ಟೌನ್ಶಿಪ್ಗೆ ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ರಾಯಭಾರಿಯಾಗಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ತುಳಸಿಯಾನಿ ಮತ್ತು ನಿರ್ದೇಶಕ ಮಹೇಶ್ ತುಳಸಿಯಾನಿ ಅವರ ವಿರುದ್ದೌೂ ಕೇಸು ದಾಖಲಾಗಿದೆ. ಕಂಪನಿ ಪ್ಲಾಟ್ ಅನ್ನು ಬೇರೆಯವರಿಗೆ ನೀಡಿ ವಂಚಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬ್ರಾಂಡ್ ಅಂಬಾಸಿಡರ್ ಗೌರಿ ಖಾನ್ ಅವರ ಪ್ರಭಾವದಿಂದಾಗಿಯೇ ನಾನು ಲಖನೌದಲ್ಲಿರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಫ್ಲಾಟ್ ಮಾಡಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.









































