ಬಂಧಿಸಲು ಬಂದ ಪೊಲೀಸರನ್ನು ತಳ್ಳಿ ಪಲಾಯನ ಮಾಡಿದ ಆರೋಪಿ
ಕಲಬುರಗಿ : ರಾಜ್ಯದಲ್ಲಿ ಸಂಚಲನವುಂಟುಮಾಡಿದ್ದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಸಿಐಡಿ ಪೊಲೀಸರ ಕಣ್ಣೆದರೇ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಪ್ರಮುಖ ಆರೋಪಿ ಪಲಾಯನ ಮಾಡಿರುವುದರಿಂದ ತೀವ್ರ ಹಿನ್ನೆಡೆಯಾಗಿದಂತಾಗಿದೆ.
ಗುರುವಾರ ರಾತ್ರಿ ಪಾಟೀಲ್ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ಸಿಐಡಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಆರೋಪಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ ಬಳಿಕ ಸಂಜೆ ಸಿಐಡಿ ಅದಿಕಾರಿಗಳು ಬಂಧಿಸಲು ಹೋಗಿದ್ದರು.
ರುದ್ರಗೌಡ ಪಾಟೀಲನ ವಿರುದ್ಧ ತುಮಕೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ವಿಚಾರಣೆ ಸಂಬಂಧ ಪೊಲೀಸರು ಆತನನ್ನು ಬಂಧಿಸಲು ಕಲಬುರಗಿಗೆ ಆಗಮಿಸಿದ್ದರು. ಈ ಸಮಯದಲ್ಲಿ ಆತ ಪರಾರಿಯಾಗಿದ್ದಾನೆ.
ಸಿಐಡಿ ತಂಡದ ಪಿಎಸ್‌ಐ ಆನಂದ್ ನೇತೃತ್ವದಲ್ಲಿ ರುದ್ರಗೌಡ ಪಾಟೀಲ್ ಬಂಧಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಆನಂದ್ ಅವರನ್ನು ತಳ್ಳಿ ಪಾಟೀಲ್ ಪರಾರಿಯಾಗಿದ್ದು, ಸಿಐಡಿ ಪೊಲೀಸರು ಈ ಕುರಿತು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಹಗರಣ ಬೆಳಕಿಗೆ ಬಂದ ಬಳಿಕ ಪರಾರಿಯಾಗಿದ್ದ. ಬಳಿಕ ಹಗರಣದ ತನಿಖೆ ಕೈಗೊಂಡ ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಆತನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಆರೋಪಿ ಪದೇ ಪದೆ ವಿಚಾರಣೆಗೆ ಗೈರಾಗುತ್ತಿದ್ದ.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಅಭ್ಯರ್ಥಿಗಳಿಗೆ ತನ್ನ ಸಹಚರರ ಮೂಲಕ ಬ್ಲೂಟೂತ್ ಡಿವೈಸ್ ಅನ್ನು ರುದ್ರಗೌಡ ಪಾಟೀಲ್ ನೀಡುತ್ತಿದ್ದ. ಅವರಿಂದ ಹಣವನ್ನು ಪಡೆಯುತ್ತಿದ್ದ ಎಂಬುದು ಆರೋಪವಾಗಿದೆ.
ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಹ ನಡೆದಿರುವುದರಿಂದ ಇಡಿ ತನಿಖೆ ಕೈಗೊಂಡಿತ್ತು. ಗುರುವಾರ ಇಡಿ ಪೊಲೀಸರು ರುದ್ರಗೌಡ ಮನೆ ಮೇಲೆ ದಾಳಿ ಮಾಡಿದ್ದರು. ರಾತ್ರಿ ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಆತ ಮನೆಯಿಂದ ಪರಾರಿಯಾಗಿದ್ದಾನೆ.
























