ಆಳ್ವಾಸ್‍ನಲ್ಲಿ ಯೋಗಥಾನ್ 2023

ಮೂಡುಬಿದಿರೆ : ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಿದ ದೇಶ ಭಾರತ. ಇಂತಹ ಯೋಗದ ಪ್ರಾಮುಖ್ಯತೆಯನ್ನು ಸಾರುವಲ್ಲಿ ವಿಶಿಷ್ಟವಾದ ಉತ್ಸವವನ್ನು ಕರ್ನಾಟಕದಲ್ಲಿ ಯೋಗಥಾನ್ ಮೂಲಕ ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ಹೇಳಿದರು.
ರಾಜ್ಯ ಸರಕಾರದ ನಿರ್ದೇಶನದಂತೆ 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಡಿಯಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವನ್ನು ಸಾಧಿಸುವ ಹಿನ್ನೆಲೆಯಲ್ಲಿ ಯೂತ್ ಫಾರ್ ಯೋಗ ಥೀಮ್‍ನೊಂದಿಗೆ ‘ಯೋಗಥಾನ್ 2023 ಅನ್ನು ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಅನಾವರಣಗೊಂಡಿತು.
ಪ್ರಾಣಾಯಾಮದ ಜತೆಗೆ ಯೋಗಾಸನಗಳಾದ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ತ್ರಿಕೋನಾಸನ, ವಜ್ರಾಸನ, ಶಶಂಕಾಸನ, ಅರ್ಧವೃಷ್ಟಾಸನ, ಪೂರ್ಣವೃಷ್ಟಾಸನ, ಉತ್ತಾನ ಮಂಡುಕಾಸನ, ದಂಡಾಸನ, ವಕ್ರಾಸನ ಸೇರಿದಂತೆ ಹಲವು ಆಸನಗಳನ್ನು ಈ ವೇಳೆ ಮಾಡಿಸಲಾಯಿತು. ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಅನಂತ ಕೃಷ್ಣ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಯುವಜನ ಮತ್ತು ನಾಗರಿಕ ಸೇವಾ ಇಲಾಖೆಯ ಸಹ ನಿರ್ದೇಶಕ ರವಿ ನಾಯ್ಕ, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ವನಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

45 ನಿಮಿಷಗಳ ಕಾಲ ನಡೆದ ಯೋಗಥಾನ್ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 27, 632 ಜನರು ಪಾಲ್ಗೊಂಡರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಗಥಾನ್ ಕಾರ್ಯಕ್ರಮಕ್ಕೆ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ನಿರೂಪಿಸಿದರು.











































error: Content is protected !!
Scroll to Top