ಭೂಮಿಗೆ ಆಪೋಶನವಾಗುತ್ತಿದೆ ಜೋಶಿಮಠ ಎಂಬ ಪುಣ್ಯನಗರಿ

ಒಂದಿಡೀ ಊರು ಕುಸಿತ; ಮನೆ ದೇವಸ್ಥಾನ, ಕಟ್ಟಡಗಳು ಬಿರುಕು

ವಿವೇಚನೆಯಿಲ್ಲದ ಅಭಿವೃದ್ಧಿಗೆ ಪ್ರಕೃತಿ ಕೊಟ್ಟ ಶಿಕ್ಷೆ

ಉತ್ತರಖಂಡ : ಉತ್ತರಖಂಡದ ಜೋಶಿಮಠ ಎಂಬ ಪುಣ್ಯಭೂಮಿಯಲ್ಲಿರುವ ಪಟ್ಟಣ ಕುಸಿಯುತ್ತಿದೆ. ಬದರಿನಾಥ ಕ್ಷೇತ್ರದ ಹೆಬ್ಬಾಗಿಲಿನಂತಿರುವುದು ಜೋಶಿಮಠ. ಸುಮಾರು 20 ಸಾವಿರ ಜನರುಳ್ಳ ಸಣ್ಣ ಊರು ಇದು. ಕಳೆದ ಕೆಲವು ದಿನಗಳಿಂದ ಹಿಮಾಲಯದ ಈ ಚೆಂದದ ಊರು ಕುಸಿಯಲು ಶುರುವಾಗಿದೆ. ಈಗಾಗಲೇ 700ಕ್ಕೂ ಅಧಿಕ ಮನೆಗಳು ಮುರಿದುಬಿದ್ದಿವೆ. ಮನೆ, ಹೋಟೇಲು, ಅಂಗಡಿ ಕಟ್ಟಡಗಳಲ್ಲಿ ಬಿರುಕು ಕಾಣಿಸುತ್ತಿದೆ. ಕಟ್ಟಡಗಳು ವಾಲಿಕೊಂಡಿವೆ. ರಸ್ತೆಗಳು ಬಾಯ್ದೆರೆಯುತ್ತಿವೆ. ದೇವಸ್ಥಾನಗಳು ಉರುಳಿ ಬೀಳುತ್ತಿವೆ. ಜನ ಆತಂಕದಲ್ಲಿದ್ದಾರೆ.
ಆದಿ ಜಗದ್ಗುರು ಶಂಕರಾಚಾರ್ಯರು ಸ್ಥಾಪಿಸಿರುವ ಜ್ಯೋತಿಷ್‌ಪೀಠ ಇರುವ, ‘ಉತ್ತರ ಭಾರತದ ಶೃಂಗೇರಿ’ ಎನ್ನಬಹುದಾದ ಉತ್ತರಾಖಂಡದ ಜೋಶಿಮಠಕ್ಕೆ ಭೂಸಮಾಧಿಯ ಭೀತಿ ಎದುರಾಗಿದೆ. ಕ್ಷಣ ಕ್ಷಣಕ್ಕೂ ಭೂಮಿಯಲ್ಲಿ ಬಿರುಕುಗಳು ಹೆಚ್ಚಾಗುತ್ತಿದ್ದು, ನಗರವನ್ನೇ ಭೂಮಿ ಆಪೋಶನ ತೆಗೆದುಕೊಳ್ಳುವ ಭೀತಿ ಎದುರಾಗಿದೆ. 20 ಸಾವಿರ ಜನರು ನಿತ್ಯ ಪ್ರಾಣಭೀತಿಯಲ್ಲಿ ಕಾಲ ನೂಕುತ್ತಿದ್ದಾರೆ. ನೂರಾರು ಕುಟುಂಬಗಳ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಭೂಕುಸಿತದಿಂದಾಗಿ ಜೋಶಿಮಠದ ಮನೆಗಳು, ಪ್ರಮುಖ ರಸ್ತೆಗಳು, ದೇವಾಲಯಗಳು ಹಾಗೂ ಕಟ್ಟಡಗಳಲ್ಲಿ ದೊಡ್ಡ ದೊಡ್ಡ ಬಿರುಕು ಕಾಣಿಸಿಕೊಂಡಿವೆ. ಕಟ್ಟಡಗಳಲ್ಲಿ ಅಂತರ್ಜಲ ಉಕ್ಕೇರಿ ಜಿನುಗುತ್ತಿದೆ. 8ನೇ ಶತಮಾನದಲ್ಲಿ ಶಂಕರಾಚಾರ್ಯರು ಸ್ಥಾಪಿಸಿರುವ ಚತುರಾಮ್ನಾಯ ಪೀಠಗಳಲ್ಲಿ ಒಂದಾದ ಅಥರ್ವಣ ವೇದಕ್ಕೆ ಸಂಬಂಧಿಸಿದ ಜ್ಯೋತಿಷ್‌ ಪೀಠ ಜೋಶಿಮಠದಲ್ಲಿದ್ದು, ಜ್ಯೋತಿರ್‌ ಮಠದ ದ್ವಾರದಲ್ಲೇ ಬಿರುಕು ಕಾಣಿಸಿಕೊಂಡಿದೆ. ಬದರಿನಾಥ ದೇಗುಲದ ವಿಷ್ಣುಮೂರ್ತಿಯನ್ನು ಚಳಿಗಾಲದಲ್ಲಿ ಜೋಶಿಮಠದ ನರಸಿಂಹ ಮಂದಿರದಲ್ಲಿ ಇಡಲಾಗುತ್ತದೆ. ಹೀಗಾಗಿ ವಿಷ್ಣು ಮೂರ್ತಿಯ ಸ್ಥಳಾಂತರಕ್ಕೂ ಆಗ್ರಹ ಕೇಳಿಬಂದಿದೆ.

ಶಿವಲಿಂಗದಲ್ಲೂ ಬಿರುಕು

ಜೋಶಿಮಠದ ಕಟ್ಟಡ ಮತ್ತು ದೇಗುಲಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಪ್ರಕರಣಗಳು ಮತ್ತಷ್ಟು ಹೆಚ್ಚಿದ್ದು, ಶನಿವಾರ ಶಂಕರಾಚಾರ್ಯ ಮಾಧವ ಆಶ್ರಮ ದೇಗುಲದ ಶಿವಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಶುಕ್ರವಾರವಷ್ಟೇ ಭಗವತಿ ದೇಗುಲವು ಭೂಕುಸಿತದ ಪರಿಣಾಮಕ್ಕೆ ಒಳಗಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದರ ನಡುವೆ ಶಂಕಾರಾಚಾರ್ಯ ಸ್ಥಾಪಿತ ಜ್ಯೋತಿಷ್‌ ಪೀಠ ಇರುವ ಜ್ಯೋತಿರ್ಮಠದ ದ್ವಾರದ ಬಾಗಿಲಲ್ಲಿ ಬಿರುಕು ಕಾಣಿಸಿದೆ. ಜತೆಗೆ ಜ್ಯೋತಿರ್ಮಠದಲ್ಲಿ ಇರುವ ಲಕ್ಷ್ಮೀನಾರಾಯಣ ದೇಗುಲದ ಸಮುಚ್ಚಯದ ಕಟ್ಟಡ, ಲಕ್ಷ್ಮೀನಾರಾಯಣ ದೇಗುಲ, ಆಡಿಟೋರಿಯಂನಲ್ಲೂ ಬಿರುಕುಗಳಿವೆ. ಜ್ಯೋತಿರ್ಮಠದ ಕಟ್ಟಡದಲ್ಲಿ ಜ್ಯೋತಿಷ್‌ ಪೀಠದ ಮೊದಲ ಗುರುಗಳಾದ ತೋಟಕಾಚಾರ್ಯ ಗುಹೆ, ತ್ರಿಪುರ ಸುಂದರಿ ರಾಜರಾಜೇಶ್ವರಿ ದೇಗುಲ ಮತ್ತು ಜ್ಯೋತಿಷ್‌ ಪೀಠದ ಶಂಕರಾಚಾರ‍್ಯ ಪೀಠಗಳಿವೆ.

ಶಂಕರಾಚಾರ್ಯರು ಸ್ಥಾಪಿಸಿದ ಪೀಠ

ಜಗದ್ಗುರು ಆದಿ ಶಂಕರಾಚಾರ್ಯರು ಸನಾತನದ ಧರ್ಮ ಪ್ರಚಾರಕ್ಕಾಗಿ 8ನೇ ಶತಮಾನದಲ್ಲಿ ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಪೀಠಗಳಲ್ಲೊಂದು. ಕರ್ನಾಟಕದ ಶೃಂಗೇರಿಯಲ್ಲಿರುವ ಶಾರದಾ ಪೀಠ, ಒಡಿಶಾದ ಗೋವರ್ಧನ ಮಠ, ಗುಜರಾತ್‌ನ ದ್ವಾರಕಾ ಪೀಠ ಹಾಗೂ ಹಿಮಾಲಯ ರಾಜ್ಯ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಜ್ಯೋತಿರ್ಮಠ ಅಥವಾ ಜೋಶಿಮಠ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು. 2021ರ ಭೀಕರ ಪ್ರವಾಹದ ನಂತರ ಜೋಶಿಮಠ ತೀವ್ರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದೆ.

ಅಭಿವೃದ್ದಿಯೇ ಮುಳುವಾಯಿತು

ಹಾಗೆಂದು ಇದು ಅನಿರೀಕ್ಷಿತವಲ್ಲ. ಜೋಶಿಮಠಕ್ಕೆ ಅಪಾಯವಿದೆ ಎಂದು ತಜ್ಞರು ಹತ್ತು ವರ್ಷಗಳ ಹಿಂದೆಯೇ ಹೇಳಿದ್ದರು. 1976ರಲ್ಲೇ ಮಿಶ್ರಾ ಆಯೋಗ ಜೋಶಿಮಠ ಭಾಗದಲ್ಲಿ Tectonic activity ಕುರಿತು ವಿವರಿಸಿ ಭೂಭಾರದ ಕುರಿತು ಎಚ್ಚರಿಸಿದಾಗ ಎಲ್ಲರೂ ಗೇಲಿ ಮಾಡಿ ನಕ್ಕಿದ್ದರು.
ಚಾರ್‌ಧಾಮ್ ಯಾತ್ರಾರ್ಥಿಗಳು, ಹಿಮಾಲಯ ಚಾರಣಿಗರು ಲಕ್ಷ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಅವರನ್ನು ನೋಡಿ ಜೋಶಿಮಠ ವ್ಯಾಪಾರಕ್ಕೆ ಇಳಿದಿತ್ತು. ಸಿಕ್ಕಸಿಕ್ಕಲ್ಲಿ ನೆಲ ಅಗೆದು ಹೋಟೆಲು, ವಸತಿಗೃಹ, ಹೋಮ್ ಸ್ಟೇ ಕಟ್ಟಲಾಯಿತು. ಎಕ್ಸ್‌ಪ್ರೆಸ್‌ ಹೈವೇ, ಡೈರೆಕ್ಟ್ ಕನೆಕ್ಟಿವಿಟಿ ಎಂದು ನೆಲ, ಕಾಡಿನ ಒಟಲನ್ನು ಅಗೆಯಲಾಯಿತು.
ಟೂರಿಸಂ ಬೆಳೆಸುವ ಹೆಸರಲ್ಲಿ ಭೂಮಿಯ ಒಡಲನ್ನು ಅವ್ಯಾಹತವಾಗಿ ಬಗೆಯಲಾಯಿತು.. ತಪೋವನ ಎಂಬಲ್ಲಿ ವರ್ಲ್ಡ್ ಬ್ಯಾಂಕಿನವರು ದುಡ್ಡು ಕೊಡ್ತಾರೆ ಎಂದು ಅಲಕಾನಂದ ನದಿಗೆ ಅಣೆಕಟ್ಟು ಕಟ್ಟಿ ವಿಷ್ಣುಗಢ ಎಚ್‌ಇ ಯೋಜನೆ ಆರಂಭಿಸಲಾಯಿತು. 13.4 ಕಿಮೀ ಉದ್ದದ ಸುರಂಗ, ಭೂಗತ ಪವರ್ ಹೌಸ್ ಇತ್ಯಾದಿ ಬೃಹತ್‌ ಯೋಜನೆಗಳು ಬಂದವು. ಅಲಕಾನಂದ ನದಿಯನ್ನೇ ತಿರುಗಿಸಲಾಯಿತು.
ಜೋಶಿಮಠವು ಭೂಕಂಪ ಅಪಾಯ ಅತಿ ಹೆಚ್ಚಿರುವ ‘ವಿ’ ವಲಯದಲ್ಲಿದೆ. ಆದರೆ, ಅಭಿವೃದ್ಧಿ ಹೆಸರಲ್ಲಿ ರಸ್ತೆ ಅಗೆವ, ಬಂಡೆ ಸಿಡಿಸುವ ಕೆಲಸ ಹಲವು ವರ್ಷಗಳಿಂದ ನಡೆಯುತ್ತಿದೆ. ಜೋಶಿಮಠ ಪಕ್ಕದಲ್ಲೇ ಅಣೆಕಟ್ಟು, ಹೆದ್ದಾರಿ, ಸುರಂಗ ನಿರ್ಮಾಣ ಕಾಮಗಾರಿ ನಡೆದದ್ದು ಬಿರುಕು ಹೆಚ್ಚಾಗಲು ಕಾರಣ ಎನ್ನಲಾಗಿದೆ. ಮಿತಿಮೀರಿ ಕಾಮಗಾರಿ ನಡೆಸದಂತೆ 1976ರಲ್ಲೇ ನ್ಯಾ. ಮಿಶ್ರಾ ಸಮಿತಿ ಎಚ್ಚರಿಸಿತ್ತು. 2009-12ರ ನಡುವೆ ಜೋಶಿಮಠ ಸುತ್ತಮುತ್ತ 130ಕ್ಕೂ ಹೆಚ್ಚು ಭೂಕುಸಿತ ಸಂಭವಿಸಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.









































error: Content is protected !!
Scroll to Top