86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ರೌಂಡ್
ಹಾವೇರಿ : ಹಾವೇರಿಯಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜನರು ಕಿಕ್ಕಿರಿದು ಬರುತ್ತಲೇ ಇದ್ದಾರೆ. ಸುಮಾರು 128 ಹೆಕ್ಟೇರ್ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಪ್ರಧಾನ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಲು ಆಸನ ಕಲ್ಪಿಸಲಾಗಿದೆ. ಜತೆಗೆ ಸಮಾನಾಂತರ ವೇದಿಕೆ ನಿರ್ಮಿಸಲಾಗಿದ್ದು, ಅಲ್ಲಿಯೂ ಸಹ ಸಾವಿರಾರು ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಕಣ್ಮನ ಸೆಳೆಯುವ ಅಲಂಕಾರ


ನಗರ ಪ್ರವೇಶಿಸುವ ದ್ವಾರಗಳಲ್ಲಿ ಹಾಕಿರುವ ಬೃಹತ್ ಬ್ಯಾನರ್‌ಗಳು ಸಾಹಿತ್ಯಾಸಕ್ತರನ್ನು ಸ್ವಾಗತ ಕೋರುತ್ತೀವೆ. ಹಾಗೆಯೇ ಹಾವೇರಿ ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇದು ಕೂಡ ಪ್ರಮುಖ ಆಕರ್ಷಣೆ ಆಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಲೈಟ್ ಸರಗಳನ್ನ ಹಾಕಲಾಗಿದೆ. ಸಮ್ಮೇಳನ ವೇದಿಕೆ ಜಾಗದ ಸುಮಾರು ನಾಲ್ಕು ಕಿಲೋಮೀಟರ್ ಅಕ್ಕಪಕ್ಕದ ಮರಗಳಿಗೂ ಸಹ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಅಲ್ಲದೆ ಪ್ರಮುಖ ವೃತ್ತಗಳಲ್ಲಿ ಕನ್ನಡದ್ವಜಗಳನ್ನು ಹಾಕಲಾಗಿದ್ದು, ಕನ್ನಡ ಧ್ವಜಗಳು ರಾರಾಜಿಸುತ್ತಿವೆ.

ಅದ್ದೂರಿ ವೇದಿಕೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾವೇರಿ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗಿತ್ತು. ವೇದಿಕೆ ಅದ್ಭುತವಾಗಿ ನಿರ್ಮಾಣವಾಗಿದ್ದು, ಸಮ್ಮೇಳನಕ್ಕೆ ಬರುವ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಅಚ್ಚಕಟ್ಟು ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಹಾವೇರಿ ಸಮ್ಮೇಳನ ಮುಂದಿನ ಸಮ್ಮೇಳನಗಳಿಗೆ ಮಾದರಿ ಆಗಲಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಮಾರು 600 ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳಿವೆ. ಮೂರು ಬೃಹತ್ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಒಂದರಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ, ಎರಡನೇಯದರಲ್ಲಿ ವಾರ್ತಾ ಇಲಾಖೆ ಪ್ರದರ್ಶನ ಮತ್ತು ಮೂರನೇ ಪ್ರದರ್ಶನವನ್ನು ಕಸಾಪ ಏರ್ಪಡಿಸಿದೆ. ಕಸಾಪ ಪ್ರದರ್ಶನದಲ್ಲಿ ವಿಶೇಷವಾಗಿ ಕನ್ನಡದ ಪ್ರಥಮಗಳ ಪುಸ್ತಕಗಳ ಪ್ರದರ್ಶನ ಮಾಡಲಾಗಿದೆ.
ಫಲಪುಷ್ಪ ಪ್ರದರ್ಶನ

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ತೋಟಗಾರಿಕಾ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ಮೂರು ಇಲಾಖೆಗಳ ಪ್ರದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಹಾವೇರಿ ಜಿಲ್ಲಾ ತೋಟಗಾರಿಗೆ ಇಲಾಖೆ ಸುಮಾರು 1 ಲಕ್ಷ 50 ಸಾವಿರ ಪುಷ್ಪಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಫಲಪುಷ್ಪಪ್ರದರ್ಶನದಲ್ಲಿ ಪುಷ್ಪಗಳಿಂದ, ತರಕಾರಿಗಳಿಂದ ಹಣ್ಣುಗಳಿಂದ ಮತ್ತು ಸಿರಿಧಾನ್ಯಗಳಿಂದ ವಿವಿಧ ಕಲಾಕೃತಿ ರಚಿಸಲಾಗಿದ್ದು, ಇವು ನೋಡುಗರನ್ನು ತನ್ನತ್ತ ಸೆಳೆಯುತ್ತಲೇ ಇವೆ.
ರಂಗೋಲಿಯಲ್ಲಿ ಪುನೀತ್ ರಾಜ್‌ಕುಮಾರ್

ಫಲಪುಷ್ಪ ಪ್ರದರ್ಶನದಲ್ಲಿ ನಟ ಪುನೀತ್ ರಾಜ್‌ಕುಮಾರ್ ಕಲಾಕೃತಿಗೆ ಪ್ರತ್ಯೇಕವಾದ ಕಲಾಪ್ರದರ್ಶನ ವಿಭಾಗ ತೆರೆಯಲಾಗಿದೆ. ನಾಡಧ್ವಜದಲ್ಲಿ ಪುನೀತ್ ರಾಜ್‌ಕುಮಾರ್ ಕಲಾಕೃತಿ ರಚಿಸಲಾಗಿದೆ. ರಂಗೋಲಿಯಲ್ಲಿ ಸಹ ಪುನೀತ್ ರಾಜ್‌ಕುಮಾರ್ ಚಿತ್ರ ರಚಿಸಲಾಗಿದೆ. ಕಲ್ಲಂಗಡಿ ಹಣ್ಣುಗಳಲ್ಲಿ ಚಿತ್ರಪ್ರದರ್ಶನ, ತರಕಾರಿಗಳಲ್ಲಿ ವಿವಿಧ ಕಲಾಕೃತಿ ರಚನೆ, ಸಿರಿಧಾನ್ಯಗಳಿಂದ ಮೂರ್ತಿ ರಚನೆ ಮತ್ತು 3,200 ಸಾವಿರ ಪುಷ್ಪಗಳಿಂದ ಕಲಾಕೃತಿ ರಚಿಸಿರುವುದಾಗಿ ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ.
ಆನೆ, ನಂದಿ, ನವಿಲು, ಛೋಟಾ ಭೀಮ್ ಸೇರಿದಂತೆ 25 ಕಲಾಕೃತಿಗಳು ಪುಷ್ಪಗಳಲ್ಲಿ ರಚನೆಯಾಗಿವೆ. ಜಿಲ್ಲೆಯ ಕನ್ನಡ ರತ್ನಗಳನ್ನು ಸಿರಿಧಾನ್ಯಗಳಲ್ಲಿ ರಚಿಸಲಾಗಿದೆ. ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.




















