ನಿಷೇಧಾಜ್ಞೆ ಜಾರಿ, ಮದ್ಯ ಮಾರಾಟ ನಿಷೇಧ
ಮಂಗಳೂರು: ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ಫಾತಿಮಾ ಸ್ಟೋರ್ ಮಾಲಕ ಅಬ್ದುಲ್ ಜಲೀಲ್ ಎಂಬುವರನ್ನು ಶನಿವಾರ ರಾತ್ರಿ 8:30ರ ವೇಳೆ ದುಷ್ಕರ್ಮಿಗಳು ಇರಿದು ಸಾಯಿಸಿದ್ದಾರೆ. ಅಬದುಲ್ ಜಲೀಲ್ ಅಂಗಡಿ ಮುಚ್ಚಿ ಮನೆಗೆ ಹೋಗಲು ತಯಾರಾಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕ್ಷುಲ್ಲಕ ವಿಚಾರಕ್ಕೆ ತಗಾದೆ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ದುಷ್ಕರ್ಮಿಗಳು ಏಕಾಏಕಿ ಚಾಕು ತೆಗೆದು ಜಲೀಲ್ಗೆ ಇರಿದು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು ಸೆಕ್ಷನ್ 144 ಹಾಕಲಾಗಿದೆ. ಮಂಗಳೂರಿನ ಸುರತ್ಕಲ್ ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುರತ್ಕಲ್, ಬಜ್ಪೆ, ಕಾವೂರು, ಪಣಂಬೂರು ವ್ಯಾಪ್ತಿಯಲ್ಲಿ ಇಂದಿನಿಂದ ಡಿ.27ರ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ತುರ್ತು ಸೇವೆಗಳಿಗೆ, ಕ್ರಿಸ್ಮಸ್ ಹಬ್ಬ ಆಚರಣೆಗೆ ಅನುಮತಿ ನೀಡಲಾಗಿದೆ.
ಸುರತ್ಕಲ್ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸುರತ್ಕಲ್, ಬಜ್ಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ರಿಂದ ಡಿ.27 ಬೆಳಗ್ಗೆ 10 ರವರೆಗೂ ನಿಷೇಧ ಹೇರಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಸುರತ್ಕಲ್, ಬಜ್ಪೆ, ಕಾವೂರು ಮತ್ತು ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಸಂಜೆ 6 ಗಂಟೆ ಒಳಗೆ ಶಿಫ್ಟ್ ಚೆಂಜ್ ಮಾಡಲು ಸೂಚಿಸಲಾಗಿದೆ. ಸಂಜೆ 6 ರಿಂದ ಬೆಳಗ್ಗೆ 6 ರವರೆಗೂ ಸಿಬ್ಬಂದಿಗಳು ರಸ್ತೆಯಲ್ಲಿ ಇರದಂತೆ ನೋಡಿಕೊಳ್ಳಲು ಆದೇಶಿಸಲಾಗಿದೆ.





















