ಫೆ. 11-12 ರಂದು ಉಡುಪಿಯಲ್ಲಿ ನಡೆಯಲಿದೆ ಸಮಗ್ರ ಯಕ್ಷ ಸಾಹಿತ್ಯ ಸಮ್ಮೇಳನ

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ. 11 ಹಾಗೂ 12ರಂದು ಉಡುಪಿಯಲ್ಲಿ ಸಮಗ್ರ ಯಕ್ಷ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಲಿದೆ. ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಾಹಿತ್ಯ ಸಮ್ಮೇಳನದಂತೆ ಗಂಡುಕಲೆ ಯಕ್ಷಗಾನದ ಸಮ್ಮೇಳನ ನಡೆಸಲು ಸರಕಾರ ನಿರ್ಧರಿಸಿದೆ.

ಸೋಮವಾರ ಸಚಿವ ವಿ. ಸುನಿಲ್ ಕುಮಾರ್ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಕುರಿತು ಮಹತ್ವದ ಸಭೆ ನಡೆದಿದೆ. ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ಅವಲೋಕಿಸುವ ಸಲುವಾಗಿ ಸಮ್ಮೇಳನ ಆಯೋಜಿಸಲಾಗುತ್ತಿದ್ದು,
ಯಕ್ಷಗಾನ ರಂಗದ ವಿದ್ವಾಂಸರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಯಕ್ಷರಂಗದ ಯಜಮಾನರಿಗೆ, ಪಿಎಚ್ ಡಿ ಪ್ರಬಂಧ ಮಂಡಿಸಿದವರಿಗೆ ಹಾಗೂ ಬಡ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ವಾಗತ , ವೇದಿಕೆ, ಆಹಾರ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯಕ್ಷಗಾನ ಪ್ರದರ್ಶನ
ಸಮ್ಮೇಳನದಂಗವಾಗಿ ಫೆ. 11 ಹಾಗೂ 12 ರಂದು ಅಹೋರಾತ್ರಿ ತೆಂಕು, ಬಡಗು, ಮೂಡಲಪಾಯ ಸೇರಿದಂತೆ ಯಕ್ಷಗಾನದ ಎಲ್ಲ ಕಲಾಪ್ರಕಾರಗಳ ಪ್ರದರ್ಶನ ನಡೆಯಲಿದೆ. ತಾಳಮದ್ದಳೆ, ಗೋಷ್ಠಿ, ಪುಸ್ತಕ ಮಾರಾಟ ಮಳಿಗೆ ಇರಲಿದೆ. ಮೇಳ ಹಾಗೂ ಕಲಾವಿದರ ಸಮಸ್ಯೆ ಬಗ್ಗೆ ಪ್ರತ್ಯೇಕ ಗೋಷ್ಠಿಯನ್ನೂ ಹಮ್ಮಿಕೊಳ್ಳಲಾಗಿದೆ.











































error: Content is protected !!
Scroll to Top