ಕಾರ್ಕಳದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ?

ಕಾರ್ಕಳ ನಗರದ ಸಂಚಾರದ ಸಮಸ್ಯೆಗಳಿಗೆ ಕೊನೆಯೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಹತ್ತಾರು ಯೋಜನೆಗಳನ್ನು ತಂದರೂ, ನೂರಾರು ನಿಯಮಗಳನ್ನು ಜಾರಿ ಮಾಡಿದರೂ ಜನರ ಗೋಳು ಮಾತ್ರ ಕಡಿಮೆಯಾಗಿಲ್ಲ. ಸಮಸ್ಯೆಗಳು ಕಡಿಮೆಯಾಗುವುದರ ಬದಲು ಹೆಚ್ಚುತ್ತಾ ಇವೆ. ಸಂಚಾರಿ ನಿಯಮಗಳು ಎಲ್ಲರಿಗೂ ಗೊತ್ತಿವೆ ಆದರೆ ಯಾರೂ ಪಾಲಿಸುತ್ತಿಲ್ಲ ಎನ್ನುವುದು ಕಾರ್ಕಳದ ವಿಶೇಷ!

ಬಸ್ ಸ್ಟಾಂಡ್ ಸಮಸ್ಯೆ!

ಹಿಂದಿನ ಬಸ್ ನಿಲ್ದಾಣಕ್ಕಿಂತ ಈಗಿನ ಬಸ್ಸು ನಿಲ್ದಾಣ ಹೆಚ್ಚು ವಿಸ್ತಾರ ಆಗಿದೆ. ಆದರೆ ಬಸ್ಸುಗಳು ಬಸ್ ನಿಲ್ದಾಣದ ಒಳಗೆ ಹೋಗುವಾಗ, ಹೊರಗೆ ಬರುವಾಗ ಯಾವ ನಿಯಮವನ್ನೂ ಪಾಲಿಸುತ್ತಿಲ್ಲ. ರಿವರ್ಸ್ ತೆಗೆಯುವಾಗ ಯಾರೂ ಎಚ್ಚರಿಕೆ ವಹಿಸುವುದಿಲ್ಲ. ಎದೆಯ ಮೇಲೇರಿ ಬಂದ ಹಾಗೆ ಬಸ್ಸುಗಳು ಓಡಾಡುತ್ತವೆ. ವಯಸ್ಸಾದವರು, ಮಕ್ಕಳು ಬಸ್ ಬಂದ ವೇಗಕ್ಕೆ ಆಚೀಚೆ ಓಡುವುದನ್ನು ನೋಡುವಾಗ ಆತಂಕ ಆಗುತ್ತದೆ. ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲ ಅನ್ನುವ ನಿಯಮವನ್ನು ಗಾಳಿಗೆ ತೂರಲಾಗಿದೆ. ಕೆಲವರಿಗೆ ತಮ್ಮ ಮನೆಯವರನ್ನು ಕಾರಿನಲ್ಲಿ ಅಥವಾ ಬೈಕಲ್ಲಿ ಕೂರಿಸಿ ಬಸ್ಸಿನ ಬುಡಕ್ಕೆ ತಂದು ಬಿಡಬೇಕು ಎನ್ನುವ ತೆವಲು.

ಬಸ್ಸು ನಿಲ್ದಾಣವನ್ನೂ ಬಿಟ್ಟಿಲ್ಲ ಅತಿಕ್ರಮಣ!

ಬಸ್ಸು ನಿಲ್ದಾಣ ವಿಸ್ತಾರ ಆಯಿತು ಎಂದು ಖುಷಿ ಪಡುವ ಹೊತ್ತಿಗೆ ಸದ್ದಿಲ್ಲದೆ ಅತಿಕ್ರಮಣ ಆಗ್ತಾ ಇದೆ. ಇದು ಪುರಸಭೆಯ ಅಧಿಕಾರಿಗಳಿಗೆ ಗೊತ್ತಿದೆ. ಆದರೆ ಯಾರೂ ಚಕಾರ ಎತ್ತುತ್ತಿಲ್ಲ. ಅಧಿಕಾರಿಗಳಿಗೆ ಗೊತ್ತಿಲ್ಲದೆ ಹೊಸ ಹೊಸ ಸ್ಟಾಲ್ ಗಳು, ಅಂಗಡಿಗಳು ಪ್ರವೇಶ ಆಗುತ್ತಿರುವುದು ಹೇಗೆ? ಕೆಲವು ಹೂವಿನ ಅಂಗಡಿಗಳಿಗೆ ಮಾರ್ಕೆಟ್ ಕಟ್ಟಡದಲ್ಲಿ ಜಾಗ ಮಾಡಿಕೊಟ್ಟರೂ ಹೋಗಲು ತಯಾರಿಲ್ಲ. ಸೋಲಾರ್ ಲೈಟ್ ಬುಡದಲ್ಲಿ ವಾಹನ ನಿಲ್ಲಿಸಬಾರದು ಎಂಬ ಬೋರ್ಡ್ ಹೆಸರಿಗೆ ಮಾತ್ರ! ಅಲ್ಲಿ ಯಾವ ಹೊತ್ತಿಗೂ ನಾಲ್ಕೈದು ವಾಹನಗಳು ನಿಂತಿರುತ್ತವೆ! ಕೆಲವೊಮ್ಮೆ ಪೊಲೀಸ್ ವಾಹನಗಳೇ ಅಲ್ಲಿ ನಿಂತಿರುತ್ತವೆ!

ಉಪಯೋಗವಾಗದ ಉಡುಪಿ ಬಸ್ ನಿಲ್ದಾಣ!

ಉಡುಪಿ ಬಸ್ ನಿಲ್ದಾಣ ಡಾಮರೀಕರಣ ಆಗಿ ಸುಸಜ್ಜಿತವಾಗಿ ರೆಡಿ ಇದ್ದರೂ ಉಡುಪಿಯ ಬಸ್ಸುಗಳು ಅಲ್ಲಿಗೆ ಹೋಗುತ್ತಿಲ್ಲ. ಈ ವ್ಯವಸ್ಥೆ ಒಂದು ಸರಿ ಆದರೆ ಕಾರ್ಕಳ ಬಸ್ಸು ನಿಲ್ದಾಣದ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಇನ್ನೊಂದು ಸಮಸ್ಯೆ ಎಂದರೆ ಕಾರ್ಕಳ ಬಸ್ ನಿಲ್ದಾಣಗಳಲ್ಲಿ ಟ್ರಾಫಿಕ್ ಔಟ್ ಪೋಸ್ಟ್ ಕೊರತೆ. ಅಲ್ಲಿ ಸಂಚಾರ ನಿಯಂತ್ರಣಕ್ಕೆ ಯಾವ ಪೊಲೀಸ್ ಅಥವ ಟ್ರಾಫಿಕ್ ಪೊಲೀಸ್ ಇರುವುದಿಲ್ಲ! ಬಸ್ ಸ್ಟ್ಯಾಂಡ್ ಒಳಗೆ ಸರ್ಕಲ್ ದಾಟಿಕೊಂಡು ಒಳಗೆ, ಹೊರಗೆ ಹೋಗುವ ಯಾವ ಬಸ್ಸುಗಳು ಕೀಪ್ ಲೆಫ್ಟ್ ನಿಯಮವನ್ನು ಪಾಲಿಸುವುದೇ ಇಲ್ಲ! ಎಲ್ಲರಿಗೂ ಅವರದ್ದೇ ಅವಸರ. ಜನರ ಜೀವದ ಬಗ್ಗೆ ಯಾರಿಗೂ ಕಾಳಜಿ ಇಲ್ಲ.

ಬಾಟಲ್ ನೆಕ್ ರಥಬೀದಿ!
ಕಾರ್ಕಳದಲ್ಲಿ ಅತೀ ಹೆಚ್ಚು ವಾಹನ ಓಡಾಡುವ ಮತ್ತು ತುಂಬಾ ನಿಬಿಡ ಆದ ರಸ್ತೆ ಸ್ಟೇಟ್ ಬ್ಯಾಂಕಿನಿಂದ ಅನಂತ ಶಯನದವರೆಗಿನ ರಥಬೀದಿ. ಕಾರ್ಕಳದಲ್ಲಿ ಪಾರ್ಕಿಂಗ್ ಸ್ಪಾಟ್ ಸಮಸ್ಯೆಯು ಇಂದು ನಿನ್ನೆಯದಲ್ಲ! ಅದು ಪರಿಹಾರ ಆಗುವುದೂ ಇಲ್ಲ! ಪರಿಣಾಮ ರಸ್ತೆಯ ಎರಡೂ ಬದಿಯಲ್ಲಿ ಬೈಕ್, ಕಾರು ಇಡೀ ದಿನ ನಿಂತುಕೊಂಡಿರುತ್ತವೆ. ಪೀಕ್ ಅವರಲ್ಲಿ ಈ ಸಮಸ್ಯೆಯು ನಿಜವಾಗಿಯೂ ಉಸಿರು ಕಟ್ಟಿಸುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಅಂಗಡಿಗಳು ಇದ್ದು ಅವುಗಳ ಸರಕು ಇಳಿಸುವ ಸಮಸ್ಯೆ ಭಾರಿ ತೊಡಕು ಉಂಟು ಮಾಡುತ್ತಿದೆ. ಹಿಂದೆ ಕಾರ್ಕಳದಲ್ಲಿ ಅಣ್ಣಾಮಲೈ ಸರ್ ಅವರು DYSP ಆಗಿದ್ದಾಗ ವಾರದಲ್ಲಿ ಮೂರು ದಿನ ಎಡಭಾಗದಲ್ಲಿ, ವಾರದ ಮೂರು ದಿನ ಬಲಭಾಗದಲ್ಲಿ ಬೆಳಿಗ್ಗೆ 11.30ರವರೆಗೆ ಸರಕು ಇಳಿಸುವ ವೇಳಾಪಟ್ಟಿ ನಿಗದಿ ಮಾಡಿದ್ದರು. ಅದರ ಬೋರ್ಡುಗಳು ಈಗಲೂ ಇವೆ. ಈ ಸಂಚಾರಿ ನಿಯಮಗಳು ಅಣ್ಣಾಮಲೈ ಸರ್ ಹೋಗುವಾಗ ಅವರ ಹಿಂದೆ ಹೊರಟುಹೋಗಿವೆ!

ವೆಂಕಟರಮಣ ದೇವಸ್ಥಾನದ ಎದುರು ಹಾಕಿದ ಎರಡು ಅಗಲವಾದ ಹಂಪ್‌ಗಳು ಚಾಲಕರ ಪ್ರಾಣ ಹಿಂಡುತ್ತಿವೆ. ದೇವಸ್ಥಾನದ ವಿಶೇಷ ಉತ್ಸವ, ಸಮಾರಾಧನೆ ಇರುವಾಗ ದೇವಳದ ಹತ್ತಿರ ರಸ್ತೆಯ ಎರಡೂ ಬದಿ ಉದ್ದಕ್ಕೂ ನಿಲ್ಲಿಸಿದ ಬೈಕುಗಳು, ಕಾರುಗಳು ರಸ್ತೆಯನ್ನು ಬಾಟಲ್ ನೆಕ್ ಮಾಡುತ್ತವೆ. ಈ ಸಮಸ್ಯೆಯ ಪರಿಹಾರ ಯಾರೂ ಯೋಚನೆ ಮಾಡಿದ ಹಾಗೆ ಇಲ್ಲ!
ಅಣ್ಣಾಮಲೈ ಸರ್ ಮಾಡಿದ ಇನ್ನೊಂದು ನಿಯಮವನ್ನು ಈಗ ಯಾರೂ ಕೇಳುವವರು ಇಲ್ಲ! ಸ್ಟೇಟ್ ಬ್ಯಾಂಕನಿಂದ ಅನಂತ ಶಯನದವರೆಗೆ ಬಸ್ಸುಗಳು ಜನ ಇಳಿಸುವುದು ಮತ್ತು ಹತ್ತಿಸುವುದು ಮಾಡಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಈಗ ಎರಡೆರಡು ಹೆಜ್ಜೆಗೂ ಬಸ್ಸುಗಳು ನಿಲ್ಲುತ್ತವೆ. ಜನರಿಗೂ ಅದೇ ಬೇಕು. ಕೈ ಅಡ್ಡ ಹಿಡಿದ ಕಡೆ ಬಸ್ಸು ನಿಲ್ಲಬೇಕು ಎಂಬ ಮರ್ಜಿ! ಮಾರ್ಕೆಟ್ ರಸ್ತೆಯಿಂದ ಮೂರು ಮಾರ್ಗಕ್ಕೆ ಕನೆಕ್ಟ್ ಆಗುವ ರಸ್ತೆಯ ಎದುರು ಬಸ್ಸು ತಡೆ ಇಲ್ಲ ಎಂಬ ಬೋರ್ಡು ಇದೆ. ಅದನ್ನು ಅಣಕಿಸುವ ಹಾಗೆ ಅಲ್ಲಿ ಬಸ್ಸು ನಿಂತು ಜನ ಹತ್ತಿಸಿಕೊಳ್ಳದೆ ಮುಂದೆ ಹೋಗುವುದೇ ಇಲ್ಲ. ಕಾರ್ಕಳ ಪುರಸಭೆಯ ಮುಂದೆ ಕಾಲು ಭಾಗ ರಸ್ತೆಯನ್ನು ಆಕ್ರಮಿಸುವ ಧ್ವಜಸ್ತಂಭ ಇದೆ. ಅಲ್ಲಿ ಅತಿಯಾದ ವಾಹನಗಳು ನಿಂತಿರುತ್ತವೆ. ಉಡುಪಿಯ ಕಡೆಗೆ ಹೋಗುವ ಬಸ್ಸುಗಳಿಗೆ ಈ ಭಾಗ ಭಾರಿ ತ್ರಾಸ ಉಂಟು ಮಾಡುತ್ತವೆ. ಬೆಳಿಗ್ಗೆ 8 ರಿಂದ 10 ಮತ್ತು ಸಂಜೆ 4 ರಿಂದ 6ರ ನಡುವೆ ಈ ರಸ್ತೆಯಲ್ಲಿ ಹೋಗಲು ಎದೆ ಗಟ್ಟಿ ಇರಬೇಕು.
ಬಂಗಲೆಗುಡ್ಡೆ ಹತ್ತಿರ ಸೂಚನಾ ಫಲಕ ಬೇಕು!
ಬಂಗಲೆಗುಡ್ಡೆ ಎದುರು ಬೈಪಾಸ್ ಕನೆಕ್ಟಿಂಗ್ ರೋಡ್ ಎದುರು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ದಾರಿ ಎಂಬ ಸಣ್ಣ ಬೋರ್ಡು ಇದೆ. ಅದು ವಾಹನಗಳ ಗಮನಕ್ಕೆ ಬರುವುದೇ ಇಲ್ಲ. ಇದರಿಂದ ಪ್ರತಿ ದಿನ ನೂರಾರು ವಾಹನಗಳು ಕಾರ್ಕಳ ಪೇಟೆಯನ್ನು ಪ್ರವೇಶ ಮಾಡಿ ಅನಂತಶಯನದವರೆಗೂ ಬರುತ್ತವೆ ಮತ್ತು ದಾರಿ ಕೇಳಿಕೊಂಡು ಮುಂದುವರೆಯುತ್ತವೆ. ಬಂಗಲೆ ಗುಡ್ಡೆಯ ಎದುರು ಸ್ವಲ್ಪ ದೊಡ್ಡ ದಾರಿ ತೋರಿಸುವ ಫಲಕ ಹಾಕಿದರೆ ಈ ಸಮಸ್ಯೆ ಪರಿಹಾರ ಮಾಡಬಹುದು. ಅಷ್ಟರ ಮಟ್ಟಿಗೆ ವಾಹನ ದಟ್ಟಣೆ ಕಡಿಮೆ ಮಾಡಬಹುದು.
ಹೆಲ್ಮೆಟ್‌ ನಿಯಮ ಕಾರ್ಕಳಕ್ಕಿಲ್ಲ!
ಉಡುಪಿ ಜಿಲ್ಲೆಯಲ್ಲಿ ಬೇರೆ ಎಲ್ಲ ಕಡೆ ಹೆಲ್ಮೆಟ್ ಕಡ್ಡಾಯ ಇದೆ. ಆದರೆ ಕಾರ್ಕಳದಲ್ಲಿ ಇಂದಿಗೂ ಹೆಲ್ಮೆಟ್ ಕಡ್ಡಾಯ ಇಲ್ಲ ಅಂದರೆ ನೀವು ನಂಬಲೇ ಬೇಕು!
ಪ್ರಬಲ ಇಚ್ಛಾ ಶಕ್ತಿಯೆ ಬೇಕು
ಮೇಲೆ ಪಟ್ಟಿ ಮಾಡಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಆದರೆ ಅಧಿಕಾರಿಗಳಿಗೆ ಪ್ರಬಲ ಇಚ್ಛಾಶಕ್ತಿ ಬೇಕು. ಪುರಸಭೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಜೊತೆಯಾಗಿ ಕೂತು ಸರಿಯಾಗಿ ಪ್ಲಾನ್ ಮಾಡಿದರೆ ಯಾವುದೂ ಕಷ್ಟ ಅಲ್ಲ. ನಿಯಮ ಮಾಡುವಷ್ಟೆ ಅನುಷ್ಠಾನ ಮುಖ್ಯ. ತುಂಬಾ ವೇಗವಾಗಿ ಬೆಳೆಯುತ್ತಿರುವ ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿರುವ ಕಾರ್ಕಳದಲ್ಲಿ ಈ ಸಮಸ್ಯೆಯು ಬೇಗ ಪರಿಹಾರ ಆಗಲಿ ಎನ್ನುವುದು ನ್ಯೂಸ್ ಕಾರ್ಕಳದ ಆಶಯ.

a href="#" target="_blank">







































error: Content is protected !!
Scroll to Top