ಊರವರ ಪ್ರೀತಿಗೆ ಆಭಾರಿಯಾಗಿದ್ದೇನೆ – ಡಾ. ಯು.ಬಿ. ರಾಜಲಕ್ಷ್ಮೀ

ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಸಮಾಜ ಸೇವೆಗೆ ವಿನಿಯೋಗ

ಕಾರ್ಕಳ : ತನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ನಮ್ಮೂರ ಜನತೆ ಸಂಭ್ರಮಿಸಿದರು. ಅತೀವ ಪ್ರೀತಿ ತೋರಿದರು. ಈ ಸಂದರ್ಭವನ್ನು ನಾನೆಂದಿಗೂ ಮರೆಯಲು ಸಾ‍ಧ್ಯವಿಲ್ಲ ಎಂದು ತರಂಗ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮೀ ಹೇಳಿದರು.

ಅವರು ನ. 28ರಂದು ಕಾರ್ಕಳ ಬಂಡಿಮಠ ಶ್ರೀ ಮೂಡುಗಣಪತಿ ದೇಗುಲದ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯ ನಡೆಸುತ್ತಿರುವ ಸಂಘ-ಸಂಸ್ಥೆಗಳಿಗೆ ಸಹಾಯ ಧನ ವಿತರಿಸಿ ಮಾತನಾಡಿದರು.

ತಾನು ಪತ್ರಿಕಾ ಕ್ಷೇತ್ರದಲ್ಲಿ ಈ ಹಂತಕ್ಕೇರಲು ತರಂಗ ವ್ಯವಸ್ಥಾಪಕ ಸಂಪಾದಕರಾಗಿರುವ ಡಾ. ಸಂಧ್ಯಾ ಪೈ ಅವರೇ ಕಾರಣ. ತರಂಗ ನನ್ನನ್ನು ಬೆಳೆಸಿತು. ಕೀರ್ತಿ, ಗೌರವ ತಂದು ಕೊಟ್ಟಿತು. ಕರ್ನಾಟಕ ರಾಜ್ಯೋತ್ಸವ ಪಡೆದಿರುವ ಈ ಕ್ಷಣದಲ್ಲಿ ನನ್ನ ತಾಯಿ ಜೀವಂತವಾಗಿರುತ್ತಿದ್ದಲ್ಲಿ ಬಹಳ ಖುಷಿಯಾಗುತ್ತಿತ್ತು ಎಂದರು.

ಡಾ. ಪ್ರಸನ್ನ ಹೆಗ್ಡೆ ಮಾತನಾಡಿ, ಯು.ಬಿ. ರಾಜಲಕ್ಷ್ಮೀ ಅವರ ಲೇಖನ ಓದಿಕೊಂಡು ಬೆಳೆದವನು ನಾನು. ಅವರ ಲೇಖನಗಳಲ್ಲಿ ನಿಖರತೆ, ಆಳವಾದ ಅಧ್ಯಯನ ಅಡಕವಾಗಿರುವುದು. ತಮ್ಮ ವೃತ್ತಿ ಮತ್ತು ತಾಯಿ ಕುರಿತು ಯು.ಬಿ. ರಾಜಲಕ್ಷ್ಮೀ ಅವರು ಅಪಾರ ಪ್ರೀತಿ ಹೊಂದಿದ್ದರು ಎಂದರು.

ಸಹಾಯ ಧನ ವಿತರಣೆ -ಸನ್ಮಾನ

ತನಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿ ಮೊತ್ತದಲ್ಲಿ ಪೇಜಾವರ ಮಠದ ನೀಲಾವರ ಗೋಶಾಲೆಗೆ 20 ಸಾವಿರ ರೂ., ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ಬೆಡ್ ಶೀಟ್, ಆಹಾರ ಸಾಮಗ್ರಿ, ಸ್ವಚ್ಛ ಬ್ರಿಗೇಡ್ ಕಾರ್ಕಳ ತಂಡಕ್ಕೆ ಕೈಗವಸು, ಬಜಗೋಳಿಯ ಅಹಿಂಸಾ ಚಾರಿಟೇಬಲ್ ಟ್ರಸ್ಟ್ ಗೆ 5 ಸಾವಿರ ರೂ., ಪತ್ರಿಕಾ ವಿತರಕ ಹರೀಶ್ ದೇವಾಡಿಗ ಅವರಿಗೆ ಧನಸಹಾಯ ನೀಡಲಾಯಿತು.

ಕಾರ್ಕಳದ ಸ್ವಚ್ಛತಾ ರಾಯಭಾರಿ ಫೆಲಿಕ್ಸ್‌ ವಾಝ್ ಹಾಗೂ ತಾಯಿಯ ನಿಕಟವರ್ತಿ-ಸ್ನೇಹಿತೆ ವಾಣಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಹಿರಿಯರಾದ ಭಾಸ್ಕರ್ ಕಾರಂತ್, ಭಾರತಿ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಭೀಮಗುಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್‌, ಹರೀಶ್‌ ಶೆಣೈ ಸಹಕರಿಸಿದರು.









































































































































































error: Content is protected !!
Scroll to Top