“ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ|
ಹಿತವಿರಲಿ ವಚನದಲಿ ಋತವ ಬಿಡದಿರಲಿ||
ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ|
ಅತಿ ಬೇಡವೆಲ್ಲಿಯುಂ -ಮಂಕುತಿಮ್ಮ”
ಮುಖದಲ್ಲಿ ಸಹಜವಾದ ನಗುವಿರಬೇಕು;ಅದು ಕಿವಿಗೆ ಕೇಳಿಸಬಾರದು.ನಾವಾಡುವ ಮಾತುಗಳು ಹಿತವಾಗಿದ್ದು ಸತ್ಯವಾಗಿರಬೇಕು.ಮನಸ್ಸಿನ ಉದ್ವೇಗದಲ್ಲಿ ಮತ್ತು ಸುಖವನ್ನು ಅನುಭವಿಸುವಾಗ ಅತಿಯಾಗದ ಹಾಗೆ ಹಿತಮಿತವನ್ನು ಕಾಯ್ದುಕೊಳ್ಳಬೇಕು ಎಂದು ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ".

ನಗುವೆ ಮುಖದ ಶ್ರೇಷ್ಠ ಅಭರಣ.ಸಂತೋಷದ ಸಂಕೇತ ಮತ್ತು ಮಧುರ ಬಾಂಧವ್ಯದ ಸೇತು.ವ್ಯಕ್ತಿತ್ವಕ್ಕೆ ಆಕರ್ಷಣೆಯ ಆಯಸ್ಕಾಂತವಾಗಿರುವ ನಗುವು ಮೊಗ್ಗು ಅರಳಿದಂತೆ ಅರಳಿದರೆ ಚೆಂದ.ಅಟ್ಟಹಾಸದ ನಗುವಿಗಿಂತ ಮುಗ್ದ ಮುಗುಳ್ನಗೆಯೆ ಮೇಲು ಎನ್ನುವುದನ್ನು ‘ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ’ಎಂದಿದ್ದಾರೆ.ಮಾತು ಹಿತವಾಗಿದ್ದು ಸತ್ಯವಾಗಿರಬೇಕು.ನೇರ ಮತ್ತು ಮೃದುವಾದ ಮಾತುಗಳು ವ್ಯಕ್ತಿಯ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸುತ್ತವೆ.’ಮೃದು ವಚನವೇ ಸಕಲ ತಪಂಗಳಯ್ಯ’ಅಂದರೆ ಸತ್ಯವನ್ನು ನುಡಿಯಬೇಕು ಆದರೆ ಅದು ಅಪ್ರಿಯವಾಗದಂತೆ ಎಚ್ಚರವಹಿಸಬೇಕು.ನಾನು ನೇರ ನುಡಿಯುವವನು ಎಂದು ಸಮರ್ಥಿಸಿಕೊಳ್ಳುತ್ತಾ ಸಾರ್ವಜನಿಕವಾಗಿ ಇತರರನ್ನು ಕಟು ಮಾತುಗಳಿಂದ ನೋಯಿಸುವುದು ಒಳ್ಳೆಯದಲ್ಲ.
ಬದುಕಿನಲ್ಲಿ ಕಷ್ಟ ನಷ್ಟಕ್ಕೆ ಸಿಲುಕಿದಾಗ ಸವಾಲುಗಳು ಎದುರಾದಾಗ ಉದ್ವೇಗಕ್ಕೆ ಒಳಗಾಗದೆ ಸಮಾಧಾನದಿಂದ ಅವುಗಳನ್ನು ಎದುರಿಸಬೇಕು.ಸುಖ ಬಂದಾಗ ಹಿಗ್ಗಿ ಮೈ ಮರೆಯಬಾರದು.ದುಃಖದಲ್ಲಿ ಕುಗ್ಗಬಾರದು. ಅತಿ ಹಿಗ್ಗು ಅಹಂಕಾರಕ್ಕೆ ಎಡೆಮಾಡಿಕೊಡುತ್ತದೆ.’ಅತಿ ಸರ್ವತ್ರ ವರ್ಜಯೇತ್’ ಎಂಬಂತೆ ಯಾವುದೂ ಅತಿಯಾಗದೆ ನಮ್ಮ ನಗೆ ಮಾತು ಮತ್ತು ಮನಸ್ಸಿನ ಭಾವಗಳೆಲ್ಲ ಹಿತಮಿತದಲ್ಲಿದ್ದಾಗ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್,ಕಾರ್ಕಳ ಘಟಕ.

























































































