ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಅಧಿನಿಯಮ – 2025

ಖಾಸಗಿ ಲೇವಾದೇವಿದಾರರು ಅಥವಾ ಸಾಲ ನೀಡುವವರು ಸಾಲ ಪಡಕೊಂಡವರಿಂದ ಮಿತಿ ಮೀರಿದ ದರದ ಬಡ್ಡಿಯನ್ನು ವಸೂಲು ಮಾಡುವುದನ್ನು ಮತ್ತು ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯುವ ಪ್ರಮುಖ ಉದ್ದೇಶದಿಂದ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004 ಎಂಬ ಕಾನೂನು ನಮ್ಮ ರಾಜ್ಯದಲ್ಲಿ 2004ರಿಂದಲೇ ಜ್ಯಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಖಾಸಗಿ ಲೇವಾದೇವಿದಾರರು ಸರ್ಕಾರವು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವುದನ್ನು ಮತ್ತು ಸಾಲ ವಸೂಲಾತಿಗಾಗಿ ಸಾಲ ಪಡಕೊಂಡ ವ್ಯಕ್ತಿಗಳಿಗೆ ಬೆದರಿಕೆ ಹಾಕುವ, ಹಿಂಸೆ ನೀಡುವ ಅಥವಾ ಸಾಲಗಾರರ ಆಸ್ತಿಯನ್ನು ಬಲವಂತವಾಗಿ ವಶ ಪಡಿಸಿಕೊಳ್ಳುವ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳೆಂದು ಘೋಷಿಸಲ್ಪಟ್ಟಿದ್ದು ಇಂತಹ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಸೂಕ್ತ ಶಿಕ್ಷೆಯನ್ನು ನೀಡಲು ಅವಕಾಶ ಕಲ್ಪಿಸಿದೆ.

ಕೆಲವು ಸಂದರ್ಭಗಳಲ್ಲಿ ತಮ್ಮ ಅಗತ್ಯದ ಗರ್ಜುಗಳಿಗಾಗಿ ಜನರು ಅನಿವಾರ್ಯವಾಗಿ ಸಾಲ ಪಡೆಯುವ ಸಂದರ್ಭದಲ್ಲಿ ಸರಿಯಾಗಿ ಯೋಚನೆ ಮಾಡದೇ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಅಂದರೆ ದಿನಾಂಕ, ಮೊತ್ತ ಮತ್ತಿತರ ವಿವರಗಳನ್ನು ನಮೂದಿಸದೆ ಸಾಲ ನೀಡುವ ವ್ಯಕ್ತಿಗಳಿಗೆ ನೀಡುವುದರಿಂದ ಮತ್ತು ತಮ್ಮ ಜಮೀನು ಅಥವಾ ಸ್ವತ್ತನ್ನು ಅಥವಾ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅನಧಿಕೃತವಾಗಿ ಸಾಲ ನೀಡುವ ವ್ಯಕ್ತಿಗಳಿಗೆ ಹಸ್ತಾಂತರ ಮಾಡುವುದರಿಂದ ಮುಂದಕ್ಕೆ ಸಾಲ ಪಡಕೊಳ್ಳುವ ವ್ಯಕ್ತಿಗಳು ಅದರಲ್ಲೂ ರೈತರು, ಕೃಷಿ ಕಾರ್ಮಿಕರು ಮತ್ತಿತರ ಮುಗ್ಧ ಸಾರ್ವಜನಿಕರು ಅಕ್ರಮ ಬಡ್ಡಿ ವಸೂಲು ಮಾಡುವ ವ್ಯಕ್ತಿಗಳ ಶೋಷಣೆಗೆ ಒಳಗಾಗುವ ಸಾದ್ಯತೆಗಳು ಇರುತ್ತದೆ. ಇವೆಲ್ಲಾ ಕಾರಣದಿಂದ 2004ರಿಂದ ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಮೇಲ್ಕಾಣಿಸಿದ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004ನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ಕಳೆದ 2025ರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ನ್ನು ತಿದ್ದುಪಡಿಗೊಳಿಸಿ ‘ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಅಧಿನಿಯಮ, 2025’ ಎಂಬ ಪರಿಷ್ಕೃತ ಕಾನೂನನ್ನು ನಮ್ಮ ರಾಜ್ಯದಾದ್ಯಂತ ಜ್ಯಾರಿಗೆ ತಂದಿರುತ್ತದೆ.

ಈ ತಿದ್ದುಪಡಿ ಕಾನೂನಿನ ಪ್ರಕಾರ ಅಧಿಕ ಬಡ್ಡಿ ವಸೂಲಾತಿಗಾಗಿ ಸಾಲ ನೀಡಿದ ವ್ಯಕ್ತಿಯು ಸಾಲ ಪಡಕೊಂಡ ವ್ಯಕ್ತಿಯನ್ನು ಪೀಡಿಸಿದರೆ ಅಥವಾ ತೊಂದರೆ ನೀಡಿದರೆ ಅಥವಾ ಈ ಕುರಿತು ದುಷ್ಪ್ರೇರಣೆ ನೀಡಿದರೆ ಅಂತಹ ವ್ಯಕ್ತಿಯು ಶಿಕ್ಷಾರ್ಹ ಅಪರಾಧ ನಡೆಸಿರುವುದಕ್ಕಾಗಿ ಕಠಿಣ ಜೈಲು ಶಿಕ್ಷೆಗೆ ಮತ್ತು ದಂಡ ಪಾವತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾಲ ಪಡಕೊಂಡ ವ್ಯಕ್ತಿ ಅಥವಾ ಆತನ ಕುಟುಂಬದ ಯಾವುದೇ ಸದಸ್ಯ ಸಾಲ ನೀಡಿದವನಿಂದ ಅಥವಾ ಆತನ ಜನರಿಂದ ಸಾಲ ವಸೂಲಾತಿ ಬಗ್ಗೆ ಬೆದರಿಕೆ, ಒತ್ತಾಯ, ಶೋಷಣೆ ಅಥವಾ ತೊಂದರೆಗಳಿಂದ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಇವೆಲ್ಲಕ್ಕೂ ಸಾಲ ನೀಡಿದ ವ್ಯಕ್ತಿಯೇ ಜವಾಬ್ದಾರನಾಗುತ್ತಾನೆ. ಈ ನಿಟ್ಟಿನಲ್ಲಿ ಸಾಲ ಅಥವಾ ಅದರ ಮೇಲಿನ ಬಡ್ಡಿಯನ್ನು ವಸೂಲು ಮಾಡುವ ಸಲುವಾಗಿ ಸಾಲ ನೀಡಿದ ವ್ಯಕ್ತಿ ಅಥವಾ ಆತನ ಜನರು ಸಾಲ ಪಡೆದಾತನಿಗೆ ಅಥವಾ ಆತನ ಮನೆಯವರಿಗೆ ಮೇಲ್ಕಾಣಿಸಿದ ಕಾನೂನಿನ ನಿಯಮಗಳಿಗೆ ವ್ಯತಿರಿಕ್ತವಾಗಿ ನಡಕೊಂಡಲ್ಲಿ ಅಂದರೆ ಮಿತಿ ಮೀರಿದ ದರದ ಬಡ್ಡಿಯನ್ನು ವಸೂಲು ಮಾಡುವುದಕ್ಕಾಗಿ ಯಾವುದೇ ರೀತಿಯ ಬೆದರಿಕೆ ಒಡ್ಡಿದರೆ, ಹಲ್ಲೆ ನಡೆಸಿದರೆ ಅಥವಾ ಕಾನೂನು ಬಾಹಿರವಾಗಿ ವರ್ತಿಸಿದರೆ ಅಂತಹ ವ್ಯಕ್ತಿಯ ವಿರುದ್ಧ ಬೆದರಿಕೆಗೆ ಅಥವಾ ಹಲ್ಲೆಗೆ ಒಳಗಾದ ವ್ಯಕ್ತಿಯು ಸರಕಾರಕ್ಕೆ ಅಥವಾ ಪೋಲಿಸ್ ಮತ್ತಿತರ ಇಲಾಖಾಧಿಕಾರಿಗಳಿಗೆ ಅಥವಾ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅವಕಾಶವಿರುವುದು ಮಾತ್ರವಲ್ಲದೇ ಈ ಸಂದರ್ಭದಲ್ಲಿ ಸಾಲಗಾರರ ಬೆದರಿಕೆಗೆ ಅಥವಾ ದೌರ್ಜನ್ಯಕ್ಕೆ ಒಳಗಾಗುವ ವ್ಯಕ್ತಿ ತನ್ನ ಮತ್ತು ತನ್ನ ಕುಟುಂಬದವರಿಗೆ ಸೂಕ್ತ ರಕ್ಷಣೆಯನ್ನು ಪಡೆಯಬಹುದಾಗಿದೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಸಾಲ ಅಥವಾ ಅದರ ಮೇಲಿನ ಬಡ್ಡಿ ಹಣದ ಮರುಪಾವತಿಗಾಗಿ ಅಥವಾ ಭದ್ರತೆಗಾಗಿ ಒತ್ತಾಯದಿಂದ ಅಥವಾ ಬಲಾತ್ಕಾರದಿಂದ ಸಾಲ ಪಡಕೊಂಡವನ ಚರ ಅಥವಾ ಸ್ಥಿರ ಸ್ವತ್ತನ್ನು ಅಥವಾ ಆಸ್ತಿಯನ್ನು ಸಾಲ ನೀಡಿರುವ ವ್ಯಕ್ತಿ ಈ ಮೊದಲೇ ತನ್ನ ಸ್ವಾಧೀನತೆಗೆ ಪಡೆದುಕೊಂಡಿದ್ದರೆ ಸಂಬಂಧಪಟ್ಟ ನ್ಯಾಯಾಲಯವು ಅಂತಹ ಸ್ವತ್ತಿನ ಅಥವಾ ಆಸ್ತಿಯ ಸ್ವಾಧೀನವನ್ನು ಸಾಲ ಪಡಕೊಂಡಾತನಿಗೆ ವಾಪಸ್ಸು ಕೊಡಿಸುವ ಬಗ್ಗೆ ಸೂಕ್ತ ಆದೇಶ ನೀಡುವ ಅಧಿಕಾರ ಹೊಂದಿರುತ್ತದೆ.

































































































error: Content is protected !!
Scroll to Top