“ಓರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ|
ಧರ್ಮ ಸಂಕಟಗಳಲಿ,ಜೀವ ಸಮರದಲಿ||
ನಿರ್ವಾಣ ದೀಕ್ಷೆಯಲಿ,ನಿರ್ಯಾಣ ಘಟ್ಟದಲಿ|
ನಿರ್ಮಿತ್ರನಿರಲು ಕಲಿ-ಮಂಕುತಿಮ್ಮ.”
ಜೀವನದ ಕ್ಲಿಷ್ಟಕರ ಸಂದರ್ಭಗಳಲ್ಲಿ, ಧರ್ಮ ಸಂಕಟದ ಕ್ಷಣಗಳಲ್ಲಿ,ಬದುಕಿನ ಹೋರಾಗಳಲ್ಲಿ,ಅಧ್ಯಾತ್ಮದ ಹಾದಿಯಲ್ಲಿ,ನಿರ್ಣಯ ತೆಗೆದುಕೊಳ್ಳುವ ಹಂತದಲ್ಲಿ ನೀನು ಒಬ್ಬನೇ ನಿಲಬೇಕಾಗುತ್ತದೆ.ಮಿತ್ರರಿಂದಲೂ ಇಂತಹ ಸಂದರ್ಭಗಳಲ್ಲಿ ನೆರವನ್ನು ನಿರೀಕ್ಷಿಸದೆ ಒಬ್ಬಂಟಿಯಾಗಿ ಬದುಕನ್ನು ಎದುರಿಸಲು ಕಲಿಯಬೇಕು ಎನ್ನುವ ಸಂದೇಶವನ್ನು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ಬದುಕಿನಲ್ಲಿ ಬರುವಾಗ ಒಂಟಿ,ಹೋಗುವಾಗಲೂ ಒಂಟಿ ಮಾತ್ರವಲ್ಲ ಇರುವಾಗಲೂ ಒಬ್ಬಂಟಿ. ಇತರರ ಮೇಲೆ ಅವಲಂಬಿತವಾಗದೆ ಏಕಾಂಗಿಯಾಗಿ ಬದುಕಿನಲ್ಲಿ ಎದುರಾಗುವ ಎಲ್ಲಾ ಸಮಸ್ಯೆ ಹಾಗೂ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಲು ಕಲಿಯಬೇಕು.ಯಾರಿಗೆ ಯಾರೂ ಇಲ್ಲ.ಅವರವರ ತಲೆಗೆ ಅವರವರ ಕೈ ಎಂಬ ಹಿರಿಯರ ಅನುಭವದ ಮಾತು ಇಂದು ನಿಜವಾಗುತ್ತಿದೆ.ಕರೋನ ಬಂದಾಗ ಬಂಧುಗಳೆಲ್ಲಾ ದೂರ ದೂರ.ಅನೇಕರು ಈ ರೀತಿಯ ಸನ್ನಿವೇಶವನ್ನು ಎದುರಿಸಲಾಗದೆ ಭಯದಿಂದಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕ್ಷಿಷ್ಟಕರ ಸಂದರ್ಭವನ್ನು ಎದರಿಸುವ ಮಾನಸಿಕ ಗಟ್ಟಿತನ ಬೇಕಾಗುತ್ತವೆ.ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತರಾಗುವುದನ್ನು ಬಿಟ್ಟು ಏನೇ ಬಂದರೂ ನಾನೇ ಎದುರಿಸಿ ಜಯಿಸುತ್ತೇನೆ ಎನ್ನುವ ಸಕಾರಾತ್ಮಕ ಮನೋಭಾವ ರೂಢಿಸಿಕೊಳ್ಳಬೇಕು.

‘ಅವರವರ ಹೆಗಲಿಗಿದೆ ಅವರವರ ಹೆಣಭಾರ| ನಿನ್ನ ಕತೆ ಕೇಳಲಿಕೆ ಯಾರಿಗಿದೆ ಸಮಯ? |
ಯಾರೊಲವ ಯಾಚಿಪುದು ಬಿರಿವ ಮಲ್ಲಿಗೆ ಮೊಗ್ಗು?| ನರಳುವುದು ಬದುಕಲ್ಲ-ಮುದ್ದುರಾಮ’-ಎಂಬ ಕವಿ ಕೆ.ಶಿವಪ್ಪನವರ ನುಡಿ ಅಡಿಗಡಿಗೆ ಇತರರನ್ನು ಆಶ್ರಯಿಸದೆ ಇತರ ಪ್ರೀತಿ ಅಥವಾ ಸಾಂತ್ವಾನವನ್ನು ನಿರೀಕ್ಷಿಸದೆ ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು.ಪ್ರತಿಯೊಬ್ಬರಿಗೂ ಅವರವರದೇ ಆದ ಸಮಸ್ಯೆಗಳು ಮತ್ತು ಜವಾಬ್ದಾರಿಗಳಿರುತ್ತವೆ.ನಮ್ಮ ಕಷ್ಟಗಳನ್ನು ಕೇಳುವ ಸಹನೆ ಮತ್ತು ಸಮಯ ಯಾರಿಗಿರುತ್ತದೆ.ಬದುಕಿನ ಈ ವಾಸ್ತವವನ್ನು ಅರ್ಥೈಸಿಕೊಂಡು; ನನಗೆ ಯಾರಿಲ್ಲ ಎಂದು ನರಳದೆ ಎಲ್ಲರೂ ನನ್ನೊಂದಿಗಿದ್ದಾರೆ ಎನ್ನುವ ಭರವಸೆಯ ಭಾವನೆಯೊಂದಿಗೆ ಬದುಕಿದಾಗ ಜೀವನ ಸಾರ್ಥಕವಾಗುವುದಲ್ಲವೆ?


ಅಧ್ಯಕ್ಷರು, ಕಾರ್ಕಳ ಸಾಹಿತ್ಯ ಪರಿಷತ್.













