ಕಾರ್ಕಳ : ಗೋವು ಜೀವರಾಶಿಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪೂಜನೀಯವಾದುದು. ಹೀಗಾಗಿ ಗೃಹಪ್ರವೇಶದ ಸಂದರ್ಭ ಗೋವನ್ನು ಮೊದಲು ಮನೆಯೊಳಗೆ ಪ್ರವೇಶ ಮಾಡಲಾಗುತ್ತಿದೆ ಎಂದು ಸಂಪುಟ ಶ್ರೀ ನರಸಿಂಹ ಮಠ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಡಿ. 27ರಂದು ಮುುನಿಯಾಲಿನ ಸಂಜೀವಿನಿ ಫಾರ್ಮ್ & ಡೈರಿಯಲ್ಲಿ ಗೋ ಧಾಮ ಲೋಕಾರ್ಪಣೆಗೊಳಿಸಿ ಬಳಿಕ ಆಶೀರ್ವಚನ ನೀಡಿದರು.
ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ, ತ್ಯಾಗ ಹಾಗೂ ಸೇವೆ ನಮ್ಮ ಅವಳಿ ಆದರ್ಶಗಳು. ಭಾರತೀಯರು ಹಿಂದಿನ ಪರಂಪರೆಗೆ ಮರಳಬೇಕಾಗಿದೆ. ಯಾವುದೋ ಕಾರಣದಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮತನ ಮರೆಯುತ್ತಿದ್ದೇವೆ. ಯುವ ಸಮುದಾಯ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಬದುಕು ಸುಂದರವಾಗಿರಲು ಸಾಧ್ಯವೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಗೋಧಾಮ ನಿರ್ಮಿಸುವುದರ ಮೂಲಕ ರಾಮಕೃಷ್ಣ ಆಚಾರ್ ಅವರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವಂತಹ ಶ್ರೇಷ್ಠ ಕಾರ್ಯ ಮಾಡುತ್ತಿದ್ದಾರೆ ಎಂದರು. ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕು| ಅಕ್ಷಯ ಗೋಖಲೆ ಗೋಸ್ಮರಣೆ- ಉಪನ್ಯಾಸ ನೀಡಿದರು. ಮೂಡಬಿದ್ರೆಯ ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಕೆ. ಶ್ರೀಪತಿ ಭಟ್ ಮಾತನಾಡಿದರು.

ಪ್ರಾಸ್ತವಿಕ ಮಾತುಗಳನ್ನಾಡಿದ ಸಂಜೀವಿನಿ ಫಾರ್ಮ್ & ಡೈರಿಯ ಮ್ಯಾನೇಜಿಂಗ್ ಟ್ರಸ್ಟಿ ಜಿ. ರಾಮಕೃಷ್ಣ ಆಚಾರ್ ಗೋವು ನಮ್ಮ ದೇಶಕ್ಕೆ, ನಮಗೆ, ಪೃಕೃತಿಗೆ ಎಷ್ಟು ಅಮೂಲ್ಯ ಎಂಬುದನ್ನು ತಿಳಿಸುವ ಕಾರ್ಯ ವ್ಯಾಪಕವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಮುನಿಯಾಲಿನಲ್ಲಿ ಗೋಧಾಮ ನಿರ್ಮಿಸಿದ್ದೇವೆ ಎಂದರು. ಸಂಜೀವಿನಿ ಫಾರ್ಮ್ & ಡೈರಿಯ ಟ್ರಸ್ಟಿ ಸವಿತಾ ಆರ್. ಆಚಾರ್ ಸ್ವಾಗತಿಸಿ, ಡಾ| ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







































