187 ಮತಗಟ್ಟೆ : 935 ಮಂದಿ ಸಿಬ್ಬಂದಿ ನಿಯೋಜನೆ
ಕಾರ್ಕಳ : ಕಾರ್ಕಳ ತಾಲೂಕಿನ 27 ಗ್ರಾಮ ಪಂಚಾಯತ್ಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ನಗರದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ. 26ರಂದು ಮಸ್ಟರಿಂಗ್ ಕಾರ್ಯ ನಡೆಯಿತು. ತಾಲೂಕಿನ 193 ಮತಗಟ್ಟೆಗಳಲ್ಲಿ (6 ಮತಗಟ್ಟೆ ಅವಿರೋಧವಾಗಿ ಆಯ್ಕೆ) 187 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಶಿಕ್ಷಕರು, ಕಂದಾಯ, ಅರಣ್ಯ, ಪಂಚಾಯತ್ ರಾಜ್ ಇಲಾಖೆಯ ಒಟ್ಟು 935 ಸಿಬಂದಿಯನ್ನು ನಿಯೋಜಿಸಲಾಗಿದೆ. ಓರ್ವ ಪೊಲೀಸ್ ಸಿಬ್ಬಂದಿ ಸಹಿತ ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಐವರು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ನಕ್ಸಲ್ ವಲಯವೆಂದು ಪರಿಗಣಿಸಲಾದ ಮತಗಟ್ಟೆಗಳಲ್ಲಿ ಎಎನ್ಎಫ್ ಸಿಬ್ಬಂದಿ ಕಾರ್ಯನಿರ್ವಹಿಸುವರು. ಒಬ್ಬರು ಡಿವೈಎಸ್ಪಿ, ಇಬ್ಬರು ವೃತ್ತ ನಿರೀಕ್ಷಕರು, ನಾಲ್ವರು ಎಸ್ಐ ಸೇರಿದಂತೆ 300 ಮಂದಿ ಪೊಲೀಸರು ಭದ್ರತೆ ಒದಗಿಸಲಿದ್ದಾರೆ. ಇದರೊಂದಿಗೆ 1 ಕೆಎಸ್ಆರ್ ಬೆಟಾಲಿಯನ್, ಗೃಹ ರಕ್ಷಕ ದಳ ಇರಲಿದೆ. ಮಸ್ಟರಿಂಗ್ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ತಹಶೀಲ್ದಾರ್ ಪುರಂದರ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು.








































