ಮಂಗಳೂರು, ಡಿ. 7: ಕರಾವಳಿಯ ತುಳು ಸಿನೆಮಾ ರಂಗಕ್ಕೆ ಇಂದು ಮತ್ತೊಂದು ಮರ್ಮಾಘಾತ. ಮಂಗಳೂರಿನ ಕೇಂದ್ರ ಭಾಗದಲ್ಲಿ ಇದ್ದ ಮತ್ತು ತುಳು ಸಿನೆಮಾ ಪ್ರದರ್ಶನಕ್ಕೆ ಹೆಚ್ಚು ಅವಕಾಶ ಕೊಟ್ಟಿದ್ದ ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರ. ಜ್ಯೋತಿ ಕಳೆದ ಅರ್ಧ ಶತಮಾನದಿಂದ ಸದಭಿರುಚಿಯ ಉತ್ತಮ ಚಿತ್ರಗಳಿಗೆ ವೇದಿಕೆ ಆಗಿತ್ತು. ಅದರಲ್ಲೂ ತುಳು ಸಿನೆಮಾ ಪ್ರದರ್ಶನಕ್ಕೆ ಹೇಳಿ ಮಾಡಿಸಿದ ಮಂದಿರ. ಹಲವು ತುಳು ಚಿತ್ರಗಳು ಶತಮಾನೋತ್ಸವ, ರಜತ ಮಹೋತ್ಸವ ಆಚರಿಸಿದ್ದು ಇದೇ ಚಿತ್ರಮಂದಿರದಲ್ಲಿ. ಅದೀಗ ಶಾಶ್ವತವಾಗಿ ಮುಚ್ಚಿದ ಕಾರಣ ತುಳು ಸಿನೆಮಾ ರಂಗಕ್ಕೆ ಭಾರೀ ಆಘಾತ ಎಂದೇ ಹೇಳಲಾಗುತ್ತಿದೆ.ನಗರದ ಈ ಭಾಗ ಈ ಚಿತ್ರ ಮಂದಿರದ ಹೆಸರಿನಿಂದಲೇ ಗುರುತಿಸಲ್ಪಡುತ್ತಿತ್ತು. ಮಂಗಳೂರಿನಲ್ಲಿ ಈ ಮೊದಲೇ ನ್ಯೂಚಿತ್ರ, ಪ್ಲಾಟಿನಂ, ಸೆಂಟ್ರಲ್ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಈ ಸಾಲಿಗೆ ಈಗ ಜ್ಯೋತಿ ಚಿತ್ರಮಂದಿರವೂ ಸೇರಿದೆ.
ಮಂಗಳೂರಿನಲ್ಲಿ ಶಾಶ್ವತವಾಗಿ ನಂದಿದ “ಜ್ಯೋತಿ”




















