ಅಪ್ಪನೆಂಬ ಮಧುರ ಭಾವಸ್ಪರ್ಷ…

ಈ ಸಂದರ್ಭ ಪ್ರತಿಯೊಬ್ಬ ಹೆಣ್ಣು ಮಗಳ ಜೀವನದಲ್ಲಿ ಬರುವುದೇ ಆಗಿದೆ. ಪ್ರತಿ ಒಬ್ಬ ಹುಡುಗಿಯ ಮೊದಲ ಹೀರೊ ಅಪ್ಪನೇ ಆಗಿರುತ್ತಾನೆ. ಅಪ್ಪನಿಗೂ ಅಷ್ಟೇ ತನ್ನ ಮಗಳು ನಿಜವಾದ ಏಂಜೆಲ್ ಆಗಿರುತ್ತಾಳೆ. ಅತ್ಯಂತ ನವಿರಾದ ಮತ್ತು ಸೂಕ್ಷ್ಮವಾದ ಸಂಬಂಧ ಇದು. ಆಧುನಿಕ ಯುಗದಲ್ಲಿ ಸಂಬಂಧಗಳು ಸವಕಲಾಗಿವೆ ಎಂದು ಹೇಳುವವರಿಗೆ ಕೂಡ ಇಂಥ ಭಾವಸ್ಪರ್ಷಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಕರುಳ ಬಳ್ಳಿಯ ಸಂಬಂಧಗಳಿಂದ ಹೊರಬರಲು ಆಗುವುದೇ ಇಲ್ಲ. ಎಷ್ಟೋ ತಾಯಂದಿರು ಹೆಣ್ಣು ಮಗುವನ್ನು ಧಾರೆ ಎರೆದು ಕೊಡುವಾಗ ಈಗಲೂ ಕಣ್ಣೀರು ಹಾಕುವುದನ್ನು ನಾನು ನೋಡಿದ್ದೇನೆ. ಈ ರೀತಿಯ ಸಂಬಂಧಗಳು ಶಬ್ದಗಳಿಗೆ ನಿಲುಕುವುದಿಲ್ಲ. ಕೇವಲ ಫೀಲ್ ಮಾಡಿದರೆ ಮಾತ್ರ ಗೊತ್ತಾಗುವುದು. ತನ್ನ ಹೆಗಲ ಮೇಲೆ ಕೂತು ಜಗತ್ತನ್ನು ನೋಡಿದ ಮಗಳು ಬೇರೆಯವರ ಪಾಲಾಗುವ ಸಂದರ್ಭದಲ್ಲಿ ಪ್ರತಿ ಅಪ್ಪನೂ ಈ ರೀತಿಯ ಭಾವಸ್ಪರ್ಷಕ್ಕೆ ಒಳಗಾಗುತ್ತಾನೆ. ಒಳ್ಳೆಯ ಅಳಿಯ ಸಿಕ್ಕಿದ್ದಾನೆ, ಮಗಳು ಚಂದವಾಗಿ ಇರುತ್ತಾಳೆ ಎಂದು ನಂಬಿಕೆ ಇದ್ದರೂ ಅಪ್ಪನಿಗೆ ಮಗಳನ್ನು ಕಳುಹಿಸಿ ಕೊಡುವಾಗ ತನ್ನ ದೇಹದ ಯಾವುದೋ ಒಂದು ಭಾಗವನ್ನು ಕತ್ತರಿಸಿ ಕೊಟ್ಟಷ್ಟು ವೇದನೆ ಆಗುತ್ತದೆ. ತನ್ನ ಮನಸ್ಸಿನ ಎಲ್ಲಾ ಭಾವನೆಗಳನ್ನು ಹೇಳಲು ಸಾಧ್ಯವಾಗುವ ಒಂದೇ ಒಂದು ಮಾಧ್ಯಮ ಎಂದರೆ ಮಗಳು ಎಂದು ಅಪ್ಪನ ನಂಬಿಕೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಅಪ್ಪ ಹೆಚ್ಚು ಭಾವನಾತ್ಮಕ ಆಗಿ ಆಂಟಿಕೊಂಡಿರುತ್ತಾನೆ. ಮಗಳು ಕೂಡ ಅಷ್ಟೇ ಅಪ್ಪ ಅಮ್ಮನ ನಡುವೆ ಸಣ್ಣ ಪುಟ್ಟ ಜಗಳಗಳು ನಡೆದಾಗ ಅಪ್ಪನ ಪರ ವಹಿಸಿಕೊಂಡು ಬಿಡುತ್ತಾಳೆ. ಅಪ್ಪನ ಬಗ್ಗೆ ತುಂಬಾ ಕಾಳಜಿ, ಅಕ್ಕರೆ ತೋರಿಸುತ್ತಲೇ ಇರುತ್ತಾಳೆ. ಕಾಲೇಜು ಮುಗಿಸಿ ಬಂದಾಗ ಅಮ್ಮನ ಹತ್ತಿರ ಹೇಳಲಿಕ್ಕೆ ಆಗದ ಎಷ್ಟೋ ಗುಟ್ಟುಗಳನ್ನು ಅಪ್ಪನ ಹತ್ತಿರ ಹೇಳುತ್ತಾಳೆ. ಅಪ್ಪನೂ ಅಷ್ಟೇ, ಮಗಳ ಕನಸುಗಳನ್ನು ನನಸು ಮಾಡಲು ಇನ್ನಿಲ್ಲದ ಪಾಡು ಪಡುತ್ತಾನೆ. ತನ್ನ ಅಪೂರ್ಣ ಕನಸುಗಳನ್ನು ಆಕೆಯಲ್ಲಿ ಹುಡುಕುತ್ತಾನೆ. ಅಪ್ಪನ ಆರೋಗ್ಯ, ನೆಮ್ಮದಿ, ಸಂತೋಷ ಎಲ್ಲವನ್ನೂ ಹೆಗಲ ಮೇಲೆ ಹೊತ್ತುಕೊಂಡು ಮಗಳು ನಿಭಾಯಿಸುತ್ತಲೆ ಇರುತ್ತಾಳೆ.
“ಅಪ್ಪ ಅಂದರೆ ಆಕಾಶ” ಎಂದು ಅವಳ ನಂಬಿಕೆ. ಪ್ರತಿ ಹೆಣ್ಣೂ ಅಪ್ಪನಲ್ಲಿದ್ದ ಗುಣವನ್ನು ಗಂಡನಲ್ಲಿ ಹುಡುಕಲು ಹಾತೊರೆಯುವುದು ಸಹಜ. ಅಪ್ಪನ ಭುಜದ ಮೇಲೆ ಮಲಗಿದರೆ ಅವಳಿಗೆ ನೆಮ್ಮದಿಯ ನಿದ್ರೆ. ಅದೇ ಕಂಫರ್ಟನ್ನು ಅವಳು ತನ್ನ ಗಂಡನಲ್ಲಿ ಹುಡುಕುತ್ತ ಇರುತ್ತಾಳೆ. ಪುಟ್ಟ ಹುಡುಗಿ ಆಗಿದ್ದಾಗ ಅಪ್ಪನ ಹೆಗಲ ಮೇಲೆ ಕುಳಿತು ಜಾತ್ರೆ, ಸಮಾರಂಭಗಳಿಗೆ ಹೋದದ್ದು, ಬಿದ್ದು ಗಾಯ ಆದಾಗ ಮೊದಲು ಅಪ್ಪ ಬಂದು ಎತ್ತಿ ಹಿಡಿದದ್ದು, ಅಮ್ಮ ಬೈದಾಗ ಅಪ್ಪ ತನ್ನ ಪರವಾಗಿ ನಿಂತದ್ದು, ಅಣ್ಣ, ತಮ್ಮ ಜಗಳಕ್ಕೆ ನಿಂತಾಗ ಅಪ್ಪ ಅವರನ್ನು ಹಣಿದು ತನ್ನ ನೆರವಿಗೆ ನಿಂತದ್ದು…ಇಂಥ ನೂರಾರು ಸಂದರ್ಭಗಳು ಆಕೆಯ ಬಾಲ್ಯದಲ್ಲಿ ಬಂದಿರುತ್ತವೆ. ಅಪ್ಪ ‘ ನೀನೂ ಒಬ್ಬಳು ಹುಡುಗಿ’ ಎಂದು ಹೇಳದೆ ‘ನಿನ್ನನ್ನು ಮಗನ ಹಾಗೆ ಬೆಳೆಸುತ್ತೇನೆ’ ಎಂದು ಹೇಳುವಾಗ ಏನೋ ಒಂದು ಹೆಮ್ಮೆ, ಸಂಭ್ರಮ ಎಲ್ಲವೂ! ಸೂಕ್ಷ್ಮ ಭಾವನೆ ಹೊಂದಿರುವ ಪ್ರತಿ ಒಬ್ಬ ಅಪ್ಪ, ಮಗಳು ಈ ಮಧುರವಾದ ಅನುಭೂತಿಯನ್ನು ತನ್ನ ಮದುವೆಯ ಸಂದರ್ಭದಲ್ಲಿ ನೆನಪಿಸಿಕೊಂಡು ಭಾವಸ್ಪರ್ಶಕ್ಕೆ ಒಳಗಾಗಿ ಬಿಡುತ್ತಾಳೆ. ಅಪ್ಪನ ಮನದ ಒಳಗೆ ಕಣ್ಣೀರು ಸುರಿಸುತ್ತಾನೆ.
ರಾಜೇಂದ್ರ ಭಟ್ ಕೆ.

ರಾಜೇಂದ್ರ ಭಟ್‌ ಕೆ

Latest Articles

error: Content is protected !!